ಪ್ರಬಲ ಭೂಕಂಪಕ್ಕೆ ಕನಿಷ್ಠ 63 ಬಲಿ
ಅಮಾಟ್ರಿಸ್ (ಇಟಲಿ),ಆ.24: ಮಧ್ಯ ಇಟಲಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 63 ಮಂದಿ ಬಲಿಯಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6ರಷ್ಟು ತೀವ್ರತೆಯನ್ನು ದಾಖಲಿಸಿರುವ ಭೂಕಂಪವು ಮುಂಜಾನೆ 3:31ರ ವೇಳೆಗೆ ಸಂಭವಿಸಿದೆ.
ನಸುಕಿನ ಗಾಢನಿದ್ದೆಯಲ್ಲಿದ್ದ ನಿವಾಸಿಗಳ ಮೇಲೆ ಮನೆಗಳು ಬಿದ್ದು ಸಾವುನೋವು ಸಂಭವಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಮಧ್ಯ ಇಟಲಿಯ ನಗರವಾದ ಅಮಾಟ್ರಿಸ್ ಸಂಪೂರ್ಣವಾಗಿ ನಾಶಗೊಂಡಿದ್ದು, ಅಲ್ಲಿ ಎಲ್ಲಿ ನೋಡಿದರೂ ಕುಸಿದುಬಿದ್ದ ಮನೆಗಳು ಹಾಗೂ ಕಟ್ಟಡಗಳ ಭಗ್ನಾವಶೇಷಗಳು ಕಾಣುತ್ತಿವೆ ಹಾಗೂ ರಸ್ತೆಗಳಲ್ಲಿ ಕಲ್ಲುಬಂಡೆಗಳು ಚದುರಿಬಿದ್ದಿವೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಮಾಟ್ರಿಸ್‌ನ ಮೇಯರ್ ಸೆರ್ಗಿಯೊ ಪಿರೊಝಿ ಕೂಡಾ ನಗರವು ಸಂಪೂರ್ಣ ನಿರ್ನಾಮವಾಗಿರುವುದಾಗಿ ತಿಳಿಸಿದ್ದಾರೆ.
ಕೆಲವು ಭೂಕಂಪ ಪೀಡಿತ ಪ್ರದೇಶಗಳನ್ನು ಇನ್ನೂ ಕೂಡಾ ತಲುಪಲು ಸಾಧ್ಯವಾಗಿಲ್ಲವೆಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ. ರಾಜಧಾನಿ ರೋಮ್ ಸೇರಿದಂತೆ ಮಧ್ಯ ಇಟಲಿಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದೆಯೆಂದು ಮೂಲಗಳು ತಿಳಿಸಿವೆ. ಮುಂಜಾನೆಯವರೆಗೂ ಪಶ್ಚಾತ್‌ಕಂಪನಗಳುಂಟಾಗಿದ್ದು, ಅವುಗಳ ತೀವ್ರತೆ ರಿಕ್ಟರ್‌ಮಾಪಕದಲ್ಲಿ 5.1ರವರೆಗೂ ಇದ್ದುದಾಗಿ ತಿಳಿದುಬಂದಿದೆ. ಈ ಭೀಕರ ಭೂಕಂಪದ ಕೇಂದ್ರ ಬಿಂದು ರೋಮ್‌ನಿಂದ 170 ಕಿ.ಮೀ. ಈಶಾನ್ಯಕ್ಕಿರುವ ನೊರ್ಸಿಯಾದಲ್ಲಿತ್ತೆಂದು ಇಟಲಿಯ ಭೂಶಾಸ್ತ್ರ ಇಲಾಖೆ ತಿಳಿದೆ.