×
Ad

ಮೂವರು ಭಾರತೀಯ ಮೂಲದವರನ್ನು ವಿಮಾನದಿಂದ ಕೆಳಗಿಳಿಸಿದ ಬ್ರಿಟಿಶ್ ಪೊಲೀಸರು

Update: 2016-08-24 20:58 IST

ಲಂಡನ್,ಆ.24: ಇಬ್ಬರು ಯುವತಿಯರು ಸೇರಿದಂತೆ ಭಾರತೀಯ ಮೂಲದ ಮೂವರು ಮುಸ್ಲಿಂ ಒಡಹುಟ್ಟಿದವರನ್ನು ಇಲ್ಲಿನ ವಿಮಾನನಿಲ್ದಾಣದಲ್ಲಿ ್ನ ಐಸಿಸ್ ಬೆಂಬಲಿಗರೆಂದು ಪ್ರಯಾಣಿಕನೊಬ್ಬ ಆಪಾದಿಸಿದ ಬಳಿಕ ಬ್ರಿಟಿಶ್ ವಿಶೇಷ ಪೊಲೀಸ್ ಪಡೆ ಎಂ15ನ ಅಧಿಕಾರಿಗಳು ಅವರನ್ನ್ನು ವಿಮಾನದಿಂದ ಕೆಳಗಿಳಿಸಿ ತೀವ್ರವಾಗಿ ಪ್ರಶ್ನಿಸಿ, ಮಾನಸಿಕ ಕಿರುಕುಳ ನೀಡಿದ ಘಟನೆ ಬುಧವಾರ ಬ್ರಿಟನ್‌ನಲ್ಲಿ ವರದಿಯಾಗಿದೆ.


   ಬ್ರಿಟಿಶ್ ಪೌರತ್ವ ಹೊಂದಿರುವ ಸಕೀನಾ ಧಾರಾಸ್ (24), ಮರಿಯಾಂ ಧಾರಸ್(19) ಹಾಗೂ ಅಲಿ ಧಾರಾಸ್ (21) ಎಂಬವರು ಕಳೆದ ವಾರ ಇಟಲಿಯ ನಗರ ನೇಪಲ್ಸ್‌ಗೆ ತೆರಳಲು ಬ್ರಿಟನ್‌ನ ಸ್ಟಾನ್‌ಸ್ಟೆಡ್‌ನಿಂದ ವಿಮಾನವೇರಿದ್ದರು. ಕೆಲವೇ ನಿಮಿಷಗಳ ಬಳಿಕ ವಿಮಾನದ ಸಿಬ್ಬಂದಿಯೊಬ್ಬರು ಯಾವುದೇ ವಿವರಣೆ ನೀಡದೆ ತನ್ನೊಂದಿಗೆ ವಿಮಾನದ ಹೊರಗೆ ಬರುವಂತೆ ತಿಳಿಸಿದ. ವಿಮಾನದಿಂದ ಕೆಳಗಿಳಿಸಲ್ಪಟ್ಟ ಈ ಮೂವರು ಒಡಹುಟ್ಟಿದವರನ್ನು ಎಂ15 ಪೊಲೀಸರು ಸುಮಾರು ಒಂದು ತಾಸಿನವರೆಗೆ ಪ್ರಶ್ನಿಸಿದರು.

ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ, ಅವರನ್ನು ಐಸಿಸ್‌ನ ಕಾರ್ಯಕರ್ತರೆಂದು ಆರೋಪಿಸಿದ ಹಿನ್ನೆಲೆಯಲ್ಲಿ ವಿಚಾರಣೆಗೊಳಪಡಿಸುತ್ತಿರುವುದಾಗಿ ಪೊಲೀಸರು ತಮಗೆ ವಿವರಿಸಿದರೆಂದು , ಈ ಮೂವರು ಒಡಹುಟ್ಟಿದವರಲ್ಲಿ ಹಿರಿಯವಳಾದ ಸಕೀನಾ ಹೇಳಿದ್ದಾರೆ.


      ಮೊಬೈಲ್ ಫೋನ್‌ನಲ್ಲಿ ತಾವು ಐಸಿಸ್‌ಗೆ ಸಂಬಂಧಿಸಿದ ಸಂದೇಶಗಳನ್ನು ಓದುತ್ತಿದ್ದುದಾಗಿ ಪ್ರಯಾಣಿಕನು ಆಪಾದಿಸಿರುವುದಾಗಿ ಪೊಲೀಸ್ ಅಧಿಕಾರಿಯು ತಮಗೆ ತಿಳಿಸಿದ್ದಾಗಿ, ಸಕೀನಾ ಹೇಳಿದ್ದಾರೆ. ವಿಚಾರಣೆಯ ವೇಳೆ ತಾವು ಮೊಬೈಲ್‌ನಲ್ಲಿ ಪವಿತ್ರ ಕುರ್‌ಆನ್‌ನ ಸೂಕ್ತಿಯನ್ನು ಓದುತ್ತಿದ್ದುದಾಗಿ ಪೊಲೀಸರಿಗೆ ಸ್ಪಷ್ಟಪಡಿಸಿದ್ದಾಗಿ ಆಕೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸುಮಾರು ಒಂದು ತಾಸುಗಳ ಕಾಲ ನಡೆದ ವಿಚಾರಣೆಯ ವೇಳೆ ಆಕೆಯ ಪಾಸ್‌ಪೋರ್ಟ್‌ನಲ್ಲಿರುವ ವಿವಿಧ ‘ಎಂಟ್ರಿ ಸ್ಟಾಂಪ್’ಗಳ ಬಗ್ಗೆ ವಿವರಣೆ ನೀಡುವಂತೆಯೂ ಪೊಲೀಸರು ತಿಳಿಸಿದರು. ತನ್ನ ಇತ್ತೀಚಿನ ವಾಟ್ಸ್ ಅಪ್ ಸಂದೇಶಗಳನ್ನೂ ಕೂಡಾ ಆಕೆ ಅವರಿಗೆ ಪ್ರದರ್ಶಿಸಿದಳು.ಈ ಮೂವರು ಒಡಹುಟ್ಟಿದವರ ಮನೆವಿಳಾಸ, ಉದ್ಯೋಗದ ಸ್ಥಳ, ಪೋಷಕರ ಉದ್ಯೋಗಗಳು ಮತ್ತಿತರ ವಿಷಯಗಳ ಕುರಿತು ಪೊಲೀಸರು ಪ್ರಶ್ನಿಸಿದ್ದರು.
ತದನಂತರ ಅಧಿಕಾರಿಗಳು ತಮ್ಮಿಂದಾದ ಅನಾನುಕೂಲತೆಗೆ ಕ್ಷಮೆಕೋರಿದರು. ಆನಂತರ ಅವರು ಮತ್ತೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುವುಮಾಡಿಕೊಟ್ಚರೆಂದು ಸಕೀನಾ ತಿಳಿಸಿದ್ದಾರೆ.


 ‘‘ಪೊಲೀಸರಿಗೆ ನಾವು ಅಮಾಯಕರೆಂಬುದರಲ್ಲಿ ಒಂದಿಷ್ಟು ಸಂದೇಹವೂ ಉಳಿಯಲಿಲ್ಲ. ಆದರೆ ಪೊಲೀಸರಿಗೆ ನಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿ, ನಮ್ಮನ್ನು ವಿಮಾನದಿಂದ ಕೆಳಗಿಳಿಸಿದ್ದಕ್ಕಾಗಿ ಹಾಗೂ ಪೊಲೀಸರ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಿದ ಆ ಪ್ರಯಾಣಿಕನನ್ನು ಯಾಕೆ ಕ್ರಮ ಕೈಗೊಳ್ಳಲಿಲ್ಲವೆಂದು ಸಕೀನಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News