×
Ad

ಕಾಣೆಯಾಗಿರುವ ಹುಲಿ ‘ಜೈ’ ಪತ್ತೆಕಾರ್ಯ ಸಿಬಿಐಗೆ ವಹಿಸಲು ಮಹಾರಾಷ್ಟ್ರದ ಆಗ್ರಹ

Update: 2016-08-24 23:07 IST

ಮುಂಬೈ,ಆ.24: ಕಳೆದ ಎಪ್ರಿಲ್‌ನಿಂದ ಕಾಣೆಯಾಗಿರುವ ಎಲ್ಲರ ಅಕ್ಕರೆಯ ಹುಲಿ ‘ಜೈ’ ಅನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಬುಧವಾರ ಇಲ್ಲಿ ಹೇಳಿದ ರಾಜ್ಯದ ಅರಣ್ಯ ಸಚಿವ ಸುಧೀರ ಮುಂಗಂಟಿವಾರ್ ಅವರು,ಸಿಬಿಐ ತನಿಖೆಗೆ ಆಗ್ರಹಿಸಿ ಶೀಘ್ರವೇ ತಾನು ಪ್ರಧಾನಿಯವರಿಗೆ ಪತ್ರವನ್ನು ಬರೆಯುವುದಾಗಿ ತಿಳಿಸಿದರು.

250 ಕೆಜಿ ತೂಗುವ ‘ಜೈ’ ಪತ್ತೆಗಾಗಿ ನಡೆಸಿದ ಭಾರೀ ಶೋಧ ಕಾರ್ಯಾಚರಣೆ ವಿಫಲಗೊಂಡಿದೆ.
ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದ ‘ಶೋಲೆ’ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ವಹಿಸಿದ್ದ ಪಾತ್ರದ ಹೆಸರು ಹೊಂದಿರುವ ಏಳು ವರ್ಷ ಪ್ರಾಯದ ಈ ಹುಲಿ ಮೂರು ವರ್ಷಗಳ ಹಿಂದೆ ಸೂಕ್ತ ಸಂಗಾತಿಯನ್ನು ಕಂಡುಕೊಳ್ಳಲು ಗ್ರಾಮಗಳು,ನದಿಗಳು ಮತ್ತು ಅಪಾಯಕಾರಿಯಾದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಯಶಸ್ವಿ ‘ಚೈತ್ರಯಾತ್ರೆ’ಯನ್ನು ಕೈಗೊಳ್ಳುವ ಮೂಲಕ ರಾಷ್ಟ್ರಾದ್ಯಂತ ಪ್ರಸಿದ್ಧಿಗೆ ಬಂದಿತ್ತು.
  ಪ್ರವಾಸಿಗಳು ಮತ್ತು ಅರಣ್ಯ ಸಂರಕ್ಷಕರ ಅಚ್ಚುಮೆಚ್ಚಿನ ಹುಲಿಯಾಗಿರುವ ‘ಜೈ’ ಕೊನೆಯ ಬಾರಿಗೆ ಎ.18ರಂದು ತಾನು ಸಾಮಾನ್ಯವಾಗಿ ವಾಸಿಸುವ ಉಮ್ರೆದ್ ಕರಹಂಡ್ಲಾ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡು ಬಂದಿತ್ತು. ಆಗಿನಿಂದಲೂ ಅದರ ಸುರಕ್ಷಿತ ವಾಪಸಾತಿಗಾಗಿ ಸ್ಥಳೀಯರು ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ.

ಈ ವಿಷಯದಲ್ಲಿ ಹಸ್ತಕ್ಷೇಪವನ್ನು ನಡೆಸುವಂತೆ ಪ್ರಧಾನಿಯನ್ನು ತಾನು ಶೀಘ್ರವೇ ಕೇಳಿಕೊಳ್ಳುವುದಾಗಿ ತಿಳಿಸಿದ ರಾಜ್ಯದ ಬಿಜೆಪಿ ಸಂಸದ ನಾನಾ ಪಾಟೋಳೆ ಅವರು, ‘ಜೈ’ ಜೊತೆ ಅದರ ತಂದೆ ದೆಂಡು, ಅಜ್ಜ ರಾಷ್ಟ್ರಪತಿ ಮತ್ತು ಸೋದರ ವೀರು ಈ ಹುಲಿಗಳೂ ಕಾಣೆಯಾಗಿವೆ ಎಂದರು. ‘ಜೈ’ಗೆ ಅಳವಡಿಸಲಾಗಿದ್ದ ಇಲೆಕ್ಟ್ರಾನಿಕ್ ಕಾಲರ್ ಅದರ ಇರುವಿಕೆಯ ಬಗ್ಗೆ ಸಂಕೇತಗಳನ್ನು ರವಾನಿಸುವುದನ್ನು ಮೂರು ತಿಂಗಳ ಹಿಂದೆಯೇ ನಿಲ್ಲಿಸಿದಾಗ ನಾವು ಮೊದಲ ಬಾರಿಗೆ ಚಿಂತಿತರಾಗಿದ್ದೆವು ಎಂದು ಅರಣ್ಯ ಅಧಿಕಾರಿಗಳು ಹೇಳಿದರು. ಇದೇ ವೇಳೆ ಪ್ರವಾಸಿಗಳ ಕಣ್ಣಿಗೆ ಹುಲಿ ಬೀಳುವುದೇ ಕಡಿಮೆಯಾಗಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿದರು.
‘ಜೈ’ ಹುಲಿ ಎಲ್ಲಿದೆ ಎಂಬ ಬಗ್ಗೆ ಮಾಹಿತಿಗಳನ್ನು ಒದಗಿಸುವವರಿಗೆ 50,000 ರೂ.ಗಳ ಬಹುಮಾನವನ್ನು ರಾಜ್ಯಸರಕಾರ ಘೋಷಿಸಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಹುಲಿ ಶೋಧದಲ್ಲಿ ತೊಡಗಿದ್ದಾರೆ.
ಪ್ರವಾಸೋದ್ಯಮಕ್ಕೆ ಉತ್ತೇಜನದ ಜೊತೆಗೆ ಭಾರತದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ನೆರವಾದ ಹೆಗ್ಗಳಿಕೆಯೂ ‘ಜೈ’ ಪಾಲಿಗಿದೆ.
 ಜೈ 20 ಮರಿಹುಲಿಗಳಿಗೆ ಅಪ್ಪನಾಗಿರುವ ಜೊತೆಗೆ ವನ್ಯಜೀವಿ ಪ್ರೇಮಿಗಳನ್ನು ಆಕರ್ಷಿಸುವ ಮೂಲಕ ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೂ ಕಾರಣನಾಗಿದ್ದಾನೆ ಎಂದು ವನ್ಯಜೀವಿ ಪ್ರಿಯರೋರ್ವರು ಹೇಳಿದರು.
ವಿಶ್ವದ ಹುಲಿಗಳ ಪೈಕಿ ಶೇ.70ರಷ್ಟು ಅಂದರೆ 2,200 ಹುಲಿಗಳಿಗೆ ಭಾರತವೇ ತವರಾಗಿದೆ.
‘ಜೈ’ ಇನ್ನೊಂದು ಹುಲಿಯೊಂದಿಗೆ ಕಾದಾಟದಲ್ಲಿ ಗಾಯಗೊಂಡಿರಬಹುದು ಅಥವಾ ಕಳ್ಳಬೇಟೆಗಾರರಿಗೆ ಬಲಿಯಾಗಿರಬಹುದು ಅಥವಾ ಅನಾರೋಗ್ಯಕ್ಕೆ ಗುರಿಯಾಗಿರಬಹುದು ಎಂದು ಕೆಲವು ವರದಿಗಳು ಊಹಾಪೋಹ ಸೃಷ್ಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News