×
Ad

ರಾಹುಲ್ ಗಾಂಧಿ ಸ್ಪಷ್ಟೀಕರಣ

Update: 2016-08-24 23:11 IST

ಹೊಸದಿಲ್ಲಿ, ಆ.24: ಮಹಾತ್ಮ ಗಾಂಧಿಯವರನ್ನು ಕೊಂದದ್ದು ಆರೆಸ್ಸೆಸ್ ಎಂದು ತಾನು ಹೇಳಿಯೇ ಇಲ್ಲ. ಆದರೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಗಾಂಧಿ ಹತ್ಯೆಗೆ ಕಾರಣನೆಂದು ಹೇಳಿದ್ದೇನೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿಂದು ಪ್ರತಿಪಾದಿಸಿದ್ದಾರೆ.

ಮಾನನಷ್ಟ ಮೊಕದ್ದಮೆಯೊಂದರಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತನಗೆ ಜಾರಿಗೊಳಿಸ ಲಾಗಿದ್ದ ಆದೇಶವನ್ನು ಪ್ರಶ್ನಿಸಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಆರ್.ಎಫ್. ನಾರಿಮನ್‌ರಿದ್ದ ಪೀಠವು, ದೂರುದಾರರು ಒಪ್ಪಿದರೆ ದೂರನ್ನು ಖುಲಾಸೆಗೊಳಿಸುತ್ತೇನೆಂದು ತಿಳಿಸಿತು.
  ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ ವೇಳೆ, ರಾಹುಲ್ ಬಾಂಬೆ ಹೈಕೋರ್ಟ್ ಗೆ ಅಫಿದಾವಿತ್ ಒಂದನ್ನು ಸಲ್ಲಿಸಿದ್ದರು. ಚುನಾವಣಾ ರ್ಯಾಲಿಯೊಂದರಲ್ಲಿ ತಾನು, ಗಾಂಧೀಜಿಯವರ ಹತ್ಯೆ ನಡೆಸಿದ್ದುದು ಆರೆಸ್ಸೆಸ್ ಎಂದಿರಲಿಲ್ಲ. ಬದಲಾಗಿ ಅದಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿ ಎಂದು ಹೇಳಿದ್ದೇನೆಂದು ಅಫಿದಾವಿತ್‌ನಲ್ಲಿ ರಾಹುಲ್ ಹೇಳಿದ್ದರೆಂಬುದನ್ನು ನ್ಯಾಯಪೀಠ ಗಮನಿಸಿತು. ರಾಹುಲ್‌ರ ಹೇಳಿಕೆಯನ್ನು ದಾಖಲೆಗೆ ತೆಗೆದುಕೊಂಡಲ್ಲಿ ದೂರುದಾರರು ಪ್ರಕರಣಕ್ಕೆ ಅಂತ್ಯ ಹಾಡಲು ಸಿದ್ಧರಿದ್ದಾರೆಯೇ? ಎಂದು ತಿಳಿದುಕೊಳ್ಳುವಂತೆ ದೂರುದಾರರ ಪರ ಹಿರಿಯ ವಕೀಲ ಯು.ಆರ್. ಲಲಿತ್‌ರಿಗೆ ಸೂಚಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆ.1ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News