ಟೀಕೆ ಸ್ವೀಕರಿಸುವುದನ್ನು ಕಲಿತುಕೊಳ್ಳಿ
ಹೊಸದಿಲ್ಲಿ,ಆ.24: ‘ನೀವು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿದ್ದೀರಿ ಮತ್ತು ನೀವು ಟೀಕೆಗಳನ್ನು ಎದುರಿಸಲೇಬೇಕು ’ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬುಧವಾರ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಹೇಳಿದ ಸರ್ವೋಚ್ಚ ನ್ಯಾಯಾಲಯವು, ತನ್ನ ತವರು ರಾಜ್ಯದಲ್ಲಿ ಪ್ರತಿಪಕ್ಷ ನಾಯಕರ ವಿರುದ್ಧ ಮಾನನಷ್ಟ ಪ್ರಕರಣಗಳನ್ನು ದಾಖಲಿಸಿರುವುದಕ್ಕಾಗಿ ಅವರಿಗೆ ಛೀಮಾರಿ ಹಾಕಿತು.
ತಮಿಳುನಾಡು ಮಾನನಷ್ಟ ಪ್ರಕರಣಗಳಲ್ಲಿ ಹೋರಾಟಕ್ಕೆ ಸರಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಏಕಮಾತ್ರ ರಾಜ್ಯವಾಗಿದೆ ಎಂದು ನ್ಯಾಯಾಧೀಶರು ಬೆಟ್ಟು ಮಾಡಿದರು.
ಕಳೆದೈದು ವರ್ಷಗಳಲ್ಲಿ ತಾನು 200ಕ್ಕೂ ಅಧಿಕ ಮಾನನಷ್ಟ ಪ್ರಕರಣಗಳನ್ನು ದಾಖಲಿಸಿರುವುದಾಗಿ ರಾಜ್ಯಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಪೈಕಿ 55 ಪ್ರಕರಣಗಳು ಮಾಧ್ಯಮಗಳ ಮತ್ತು 85 ಪ್ರಕರಣಗಳು ಜಯಲಲಿತಾರ ಮುಖ್ಯ ಎದುರಾಳಿ ಡಿಎಂಕೆ ವಿರುದ್ಧ ವಾಗಿವೆ.
ಮಾಜಿ ನಟ ಹಾಗೂ ಪ್ರತಿಪಕ್ಷ ನಾಯಕ ವಿಜಯಕಾಂತ್ ಅವರು ಜಯಲಲಿತಾರನ್ನು ನ್ಯಾಯಾಲಯಕ್ಕೆಳೆದಿದ್ದಾರೆ. ಜಯಲಲಿತಾ ಮತ್ತು ಅವರ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ 28 ಮಾನನಷ್ಟ ಪ್ರಕರಣಗಳಲ್ಲಿ ಅವರನ್ನು ಹೆಸರಿಸಲಾಗಿದೆ. ಜಯಾ ಭ್ರಷ್ಟ ಆಡಳಿತವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಕಳೆದ ಡಿಸೆಂಬರ್‌ನಲ್ಲಿ ಚೆನ್ನೈಯನ್ನು ತಲ್ಲಣಗೊಳಿಸಿದ್ದ ನೆರೆಯು ಕೃತಕವಾಗಿದ್ದು, ಸರಕಾರವು ಅದನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ಎಡವಿತ್ತು ಎಂದು ಟೀಕಿಸಿದ್ದರು.
ಪ್ರಕರಣದ ಮುಂದಿನ ವಿಚಾರಣೆಯು ಸೆ.24ರಂದು ನಡೆಯಲಿದೆ.