ದೇಶದ್ರೋಹದ ಪರಿಧಿಯಲ್ಲಿ ಇವೆಲ್ಲವೂ ಬರುವುದಿಲ್ಲವೇ?
ಮಾನ್ಯರೆ,
ಕೇವಲ ಭಾರತದ ಭೂಪಟಕ್ಕೆ ನಮಸ್ಕರಿಸುವುದು, ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವುದು ಹಾಗೂ ರಾಷ್ಟ್ರಗೀತೆ ಹಾಡುವುದು, ಜತೆಗೆ ಯೋಧರ ಬಗ್ಗೆ ಒಂದಿಷ್ಟು ಕೃತ್ರಿಮ ಗೌರವ ತೋರಿಸುವುದು... ಇವಿಷ್ಟೇ ದೇಶ ಪ್ರೇಮದ ಸಂಕೇತಗಳೇ? ಸಾಮಾಜಿಕ ದ್ರೋಹಗಳೂ ದೇಶದ್ರೋಹದ ಪಟ್ಟಿಗೇ ಸೇರುತ್ತವೆ ಎಂಬುದು ನೆನಪಿರಲಿ. ಕಾರಣ ದೇಶ ಆಗಿರುವುದು ಸಮಾಜದಿಂದಲೇ ತಾನೇ. ಸರಕಾರಿ ನೌಕರರ ಲಂಚಕೋರತನ, ರಾಜಕಾರಣಿಗಳ ಭ್ರಷ್ಟಾಚಾರ, ಉದ್ಯಮಿಗಳ ತೆರಿಗೆಗಳ್ಳತನ, ಕೃಷಿ ಮಾರುಕಟ್ಟೆಯ ದಲ್ಲಾಳಿಗಳಿಂದ ಅಸಹಾಯಕ ರೈತರ ಶೋಷಣೆ, ವ್ಯಾಪಾರಿಗಳಿಂದ ಅಗತ್ಯ ವಸ್ತುಗಳ ಕಾಳಸಂತೆ, ಮಾರ್ವಾಡಿಗಳಿಂದ ಬಡ ಸಾಲಗಾರರ ರಕ್ತ ಹೀರುವಿಕೆ, ಇವೆಲ್ಲವೂ ಸಮಾಜದ್ರೋಹ ಹಾಗೂ ದೇಶದ್ರೋಹದ ಪರಿಧಿಯಲ್ಲಿಯೇ ಬರುತ್ತವೆ. ದೇಶದ ಪ್ರಕೃತಿ ಸಂಪತ್ತನ್ನು ಲೂಟಿಗೈದು ವಿದೇಶಕ್ಕೆ ಸಾಗಿಸಿದ ಬಳ್ಳಾರಿಯ ಗಣಿಗಳ್ಳರಂತೂ ಅತೀ ದೊಡ್ಡ ದೇಶದ್ರೋಹಿಗಳು. ಲಲಿತ್ ಮೋದಿ, ವಿಜಯ ಮಲ್ಯ, ಜತಿನ್ ಮೆಹ್ತಾ ಇವರಿಗೆ ದೇಶ ಬಿಟ್ಟು ಓಡಲು ಸಹಾಯ ಮಾಡಿದ ರಾಜಕಾರಣಿಗಳೂ ದೇಶದ್ರೋಹಿಗಳು. ಈ ಎಲ್ಲಾ ಸಮಾಜದ್ರೋಹಿ-ದೇಶದ್ರೋಹಿಗಳ ವಿರುದ್ಧ ಎಬಿವಿಪಿಯವರು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ? ಮಾಡಿದರೆ ಅದರ ಪರಿಣಾಮ ತಮ್ಮ ಬುಡಕ್ಕೆ ಬರುತ್ತದೆ ಎನ್ನುವುದಕ್ಕಾಗಿಯೇ?.
ದೇಶ ಆಗಿರುವುದು ಮನುಷ್ಯರಿಂದಲೇ ಹೊರತು ನಿರ್ಜೀವ ವಸ್ತು ಅಥವಾ ಚಿನ್ನೆ ಸಂಕೇತಗಳಿಂದ ಅಲ್ಲ. ಹಾಗಿರುವಾಗ ನಮ್ಮಲ್ಲಿಯ ಜೀವಂತ ಮನುಷ್ಯರಿಗೆ ಮೊದಲು ಗೌರವ ಕೊಟ್ಟು ಆಮೇಲೆ ನಿರ್ಜೀವ ಚಿನ್ನೆ ಸಂಕೇತಗಳಿಗೆ ಗೌರವ ಕೊಡೋಣ. ದೇಶಕ್ಕೆ ಅನ್ನ ಕೂಡುವ ರೈತ ಮತ್ತು ದೇಶವನ್ನು ಸ್ವಚ್ಛವಾಗಿಡುವ ದಲಿತ ಇವರು ದೇಶ ಕಾಯುವ ಯೋಧರಷ್ಟೇ ಅನಿವಾರ್ಯರು ಹಾಗೂ ಗೌರವಪೂರ್ಣರು. ಹಾಗಿರುವಾಗ ನಮ್ಮದೇ ದೇಶದ ಜೀವಂತ ಮನುಷ್ಯರು ತಮ್ಮ ಕುಲ ಕಸುಬು ಮಾಡುವಾಗ ಜಾತಿಯ ಹೆಸರಲ್ಲಿ ಮಾರಣಾಂತಿಕವಾಗಿ ಹೊಡೆಯುವುದು ಅಥವಾ ಕೊಲ್ಲುವುದು ಎಲ್ಲಿಯ ದೇಶಪ್ರೇಮ? ಯೋಧರಷ್ಟೇ ಮುಖ್ಯವಾಗಿರುವ ರೈತರಿಗೆ ಅಥವಾ ದಲಿತ ಚರ್ಮಕಾರರಿಗೆ ಅಗೌರವವಾದರೆ ಪರವಾಗಿಲ್ಲ ಆದರೆ ನಿರ್ಜೀವ ಸಂಕೇತಗಳಾದ ಭೂಪಟ ಧ್ವಜ ಹಾಡುಗಳಿಗೆ ಸ್ವಲ್ಪವೂ ಅಗೌರವವಾಗಬಾರದು ಎನ್ನುವುದು ವಿವೇಕಶೂನ್ಯತೆಯ ಪರಮಾವಧಿ.
ಎಬಿವಿಪಿ ಬೆಂಬಲಿಗ ಪಕ್ಷದ ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಜಿನ್ನಾರನ್ನು ಹೊಗಳಿದ್ದರು. ಇತ್ತೀಚೆಗೆ ಪ್ರಧಾನಿ ಮೋದಿಯವರು ನವಾಜ್ ಶರೀಫರ ಮೊಮ್ಮಗನ ಮದುವೆಗೆ ಅಧಿಕೃತ ಆಹ್ವಾನವಿಲ್ಲದೇ ಹೋಗಿ ಭಾರತದ ಮಾನ ಕಳೆದು ಬಂದಿದ್ದರು. ಆಗ ಎಬಿವಿಪಿಯವರು ಎಲ್ಲಿದ್ದರು? ಕನ್ನಡಿಗ ರವಿಶಂಕರ್ ಗುರೂಜಿ ಒಂದು ಅಂತಾರಾಷ್ಟ್ರೀಯ ಸಮಾರಂಭದಲ್ಲಿ ವಿದೇಶಿ ಗಣ್ಯರೆದುರೇ ‘ಪಾಕಿಸ್ತಾನ ಜಿಂದಾಬಾದ್’ ಎಂದು ಜಯಕಾರ ಹಾಕಿದ್ದನ್ನು ಎಬಿವಿಪಿಯವರು ಇಷ್ಟು ಬೇಗ ಮರೆತಿದ್ದಾರೆಯೇ ?
ರಮ್ಯಾರವರು ಪಾಕಿಸ್ತಾನದ ಸಾಮಾನ್ಯ ಜನರು ಭಾರತೀಯರಷ್ಟೇ ಒಳ್ಳೆಯವರೆಂದು ಹೇಳಿದ್ದು ಎಬಿವಿಪಿಗೆ ದೇಶದ್ರೋಹವಾಗಿ ಕಂಡಿದೆ, ಆದರೆ ಅಡ್ವಾಣಿ, ಮೋದಿ, ರವಿಶಂಕರ ಗುರು ಮುಂತಾದವರು ಮಾಡಿದ್ದು ಇವರಿಗೆ ದೇಶ ಪ್ರೇಮವಾಗಿ ಕಂಡಿತೇ? ಸಂಪೂರ್ಣ ಪಾಕಿಸ್ತಾನದ ಸಾಮಾನ್ಯ ಜನರೂ ನಮ್ಮ ವೈರಿಗಳಾಗಿದ್ದರೆ ಪಾಕಿಸ್ತಾನಕ್ಕೆ ನಮ್ಮ ಹಿಂದೂ ವ್ಯಾಪಾರಿಗಳು ಮಾಡುವ ಭಾರೀ ಲಾಭದಾಯಕ ರಫ್ತುಗಳನ್ನು ಬಿಜೆಪಿ ಸರಕಾರ ತಕ್ಷಣ ನಿಷೇಧಿಸಲಿ.
ಅಲ್ಲದೆ ರಾಜಕೀಯವಾಗಿ ಚೀನಾ ಸಹಾ ನಮ್ಮ ವೈರಿಯೇ ತಾನೇ. ಆ ವೈರಿ ದೇಶದಿಂದ ನಮ್ಮ ಗಣಪತಿ ದೇವರ ಮೂರ್ತಿ ಸಹಿತ ಹಿಂದೂ ದೇವರ ಅಲಂಕಾರದ ಎಲ್ಲ ವಸ್ತುಗಳನ್ನೂ ಹಾಗೂ ದೀಪ ಹಣತೆಗಳನ್ನೂ ಆಮದು ಮಾಡಿಕೊಂಡು ನಮ್ಮ ಸ್ವಂತ ದೇಶದ ಕುಶಲಕರ್ಮಿಗಳ ಕುಲ ಕಸುಬನ್ನು ನಿರ್ನಾಮ ಮಾಡಿ ಅವರ ಮಕ್ಕಳನ್ನು ಉಪವಾಸ ಕೆಡುವುವಾಗ ಎಬಿವಿಪಿಯವರ ದೇಶಪ್ರೇಮ ಯಾಕೆ ಉಮ್ಮಳಿಸಿ ಬರುವುದಿಲ್ಲ?