×
Ad

ಕೆನಡಾದಲ್ಲಿ ಬುರ್ಕಿನಿ ನಿಷೇಧ ಇಲ್ಲ: ಪ್ರಧಾನಿ

Update: 2016-08-25 18:32 IST

ಒಟ್ಟಾವ,ಆ.25: ಕೆನಡಾದಲ್ಲಿ ಬುರ್ಕಿನಿ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಜೆಸ್ಟಿನ್ ತ್ರುದೇವ್ ಸ್ಪಷ್ಟಪಡಿಸಿದ್ದಾರೆ. ಎಲ್ಲವನ್ನೂ ಸ್ವೀಕರಿಸುವ, ಮುಕ್ತ, ಸ್ನೇಹಮಯ ಹಾಗೂ ಪರಸ್ಪರ ತಿಳಿವಳಿಕೆ ಕೆನಡಾದ ಮೌಲ್ಯಗಳು. ಇದನ್ನು ಸರ್ಕಾರ ಗೌರವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ಬುರ್ಕಿನಿ ನಿಷೇಧ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಗಮನ ಸೆಳೆದಾಗ, "ಕೆನಡಾ ಸಹಿಷ್ಣುತೆಯನ್ನು ಗೌರವಿಸುತ್ತದೆ" ಎಂದರು. ಶಾಸನಾತ್ಮಕ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಬಗ್ಗೆ ಸಚಿವರ ಜತೆ ಚರ್ಚೆ ನಡೆಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

"ಕೆನಡಾದಲ್ಲಿ ನಾವು ಸ್ವೀಕಾರಾರ್ಹತೆ, ಮುಕ್ತತೆ, ಸ್ನೇಹದ ಬಗ್ಗೆ ಮಾತನಾಡಬೇಕೇ? ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಮುಖ್ಯ. ವೈವಿಧ್ಯಮಯ ಹಾಗೂ ಶ್ರೀಮಂತ ಸಮುದಾಯಗಳು ಇದನ್ನು ಅನುಭವಿಸುತ್ತಿವೆ" ಎಂದು ಹೇಳಿದ್ದಾರೆ. ಕೆನಡಾದ ಕ್ವೆಬೆಕ್ ಪ್ರಾಂತ್ಯದ ಕೆಲ ಸಂಸದರು ಬುರ್ಕಿನಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಫ್ರಾನ್ಸ್‌ನಲ್ಲಿ 15 ಪಟ್ಟಣಗಳು ಇವನ್ನು ಈಗಾಗಲೇ ನಿಷೇಧಿಸಿವೆ.

"ವೈಯಕ್ತಿಕ ಹಕ್ಕು ಮತ್ತು ಆಯ್ಕೆಗಳನ್ನು ಕೆನಡಾ ಗೌರವಿಸುತ್ತದೆ" ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News