×
Ad

ಭಾರತೀಯ ಮೂಲದ ತುಳಸಿ ಗಬ್ಬಾರ್ಡ್‌ಗೆ "ದೆವ್ವ" ಎಂದು ಕರೆದ ರಿಪಬ್ಲಿಕನ್ ಸದಸ್ಯ

Update: 2016-08-25 20:00 IST

ವಾಷಿಂಗ್ಟನ್,ಆ.25: ಅಮೆರಿಕನ್ ಕಾಂಗ್ರೆಸ್‌ಗೆ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತುಳಸಿ ಗಬ್ಬಾರ್ಡ್ ಅವರನ್ನು ವಿರೋಧ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಸ್ಪರ್ಧಿಯೊಬ್ಬರು "ದೆವ್ವ" ಎಂದು ಸಂಬೋಧಿಸಿರುವುದು ಅಮೆರಿಕದಲ್ಲಿರುವ ಹಿಂದೂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ಡೆಮಾಕ್ರೆಟಿಕ್ ಪಕ್ಷದಿಂದ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ 35 ವರ್ಷದ ತುಳಸಿ ಅವರ ಹಿಂದೂ ಧಾರ್ಮಿಕ ನಂಬಿಕೆಯನ್ನು ಗುರಿ ಮಾಡಿ ವಿರೋಧಿ ಅಭ್ಯರ್ಥಿ ಅಂಜೆಲಾ ಕಾಹ್ಯೂವ್ ಈ ಹೇಳಿಕೆ ನೀಡಿದ್ದಾರೆ. ತುಳಸಿ ಸತತ ಮೂರನೇ ಬಾರಿಗೆ ಹವಾಯಿ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ.

"ತುಳಸಿಯವರನ್ನು ಬೆಂಬಲಿಸುವುದು ದೆವ್ವವನ್ನು ಪೂಜಿಸಿದಂತೆ" ಎಂದು ಹೇಳಿದ್ದಲ್ಲದೇ ಡೆಮಾಕ್ರಟಿಕ್ ಪಕ್ಷವನ್ನು "ಡೆವಿಲ್ ಡೆಮಾಕ್ರಟಿಕ್ ಸ್ಟೇಟ್" ಎಂದು ಸಂಬೋಧಿಸಿದ್ದಾರೆ. ಕ್ರಿಶ್ಚಿಯನ್ನರು ತುಳಸಿಗೆ ಮತ ಹಾಕುತ್ತೇವೆ ಎಂದು ಹೇಳುವುದು ಸೈತಾನನಿಗೆ ಮತ ಹಾಕಿದಂತೆ. ಇದನ್ನು ನೀವು ಒಪ್ಪುತ್ತೀರಾ ಅಥವಾ ಇಲ್ಲವೇ? ಎಂದು ಫೇಸ್‌ಬುಕ್ ಪೋಸ್ಟಿಂಗ್‌ನಲ್ಲಿ ಕಾಹ್ಯೂವ್ ಹೇಳಿದ್ದಾರೆ. ತುಳಸಿಯವರ ಧರ್ಮ ಹಾಗೂ ನಂಬಿಕೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಅಮೆರಿಕನ್ ಹಿಂದೂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಸ್ವತಃ ರಿಪಬ್ಲಿಕನ್ ಪಕ್ಷವೇ ಈ ಹೇಳಿಕೆಯನ್ನು ಖಂಡಿಸಿದೆ. "ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಹೀನಾಯವಾಗಿ, ಜನಾಂಗೀಯವಾಗಿ ನಿಂದಿಸಿರುವುದು ಸ್ವೀಕಾರಾರ್ಹವಲ್ಲ ಹಾಗೂ ನಾಚಿಕೆಗೇಡು" ಎಂದು ಪಕ್ಷದ ಅಧ್ಯಕ್ಷ ಫ್ರಿಟ್ಸ್ ರೊಹಿಫಿಂಗ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News