×
Ad

ಹಾಜಿ ಅಲಿ ದರ್ಗಾದ ಸಮಾಧಿ ಸ್ಥಳಕ್ಕೆ ಮಹಿಳೆಯರು ಪ್ರವೇಶಿಸಬಹುದು

Update: 2016-08-26 12:57 IST

ಮುಂಬೈ, ಆ.26: ವಾಣಿಜ್ಯ ನಗರಿಯ ಪ್ರಸಿದ್ಧ ಶ್ರದ್ದಾಕೇಂದ್ರ ಹಾಜಿ ಅಲಿ ದರ್ಗಾದ ಸಮಾಧಿ ಸ್ಥಳಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.

ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎನ್‌ಜಿಒ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಹಾಗೂ ಮಹಿಳಾ ಕಾರ್ಯಕರ್ತೆಯರಾದ ನೂರ್‌ಜೆಹಾನ್ ನಿಯಾಝ್ ಹಾಗೂ ಝಾಕಿಯಾ ಸೊಮನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಮಹಿಳೆಯರು ಪುರುಷರೊಂದಿಗೆ ದರ್ಗಾದೊಳಗೆ ಪ್ರವೇಶಿಸಲು ಅನುಮತಿ ನೀಡಬೇಕು. ಮಹಾರಾಷ್ಟ್ರ ಸರಕಾರ ಎಲ್ಲರಿಗೂ ಭದ್ರತೆಯನ್ನು ಖಾತ್ರಿಪಡಿಸಬೇಕು. ಮಹಿಳೆಯರಿಗೆ ದರ್ಗಾ ಪ್ರವೇಶವನ್ನು ನಿಷೇಧಿಸುವುದು ಸಂವಿಧಾನದಲ್ಲಿ ವ್ಯಕ್ತಿಗೆ ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

‘‘ಇದೊಂದು ಐತಿಹಾಸಿಕ ತೀರ್ಪು. ನಾವು ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಮಹಿಳೆಯರಿಗೆ ಲಭಿಸಿದ ದೊಡ್ಡ ಗೆಲುವು’’ ಎಂದು ಭೂಮಾತಾ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ದರ್ಗಾ ಆಡಳಿತ ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News