ದಿಲ್ಲಿ: ಹೆತ್ತವರಿಂದ ಪರಿತ್ಯಕ್ತ ಬಾಲಕಿಯರಿಬ್ಬರ ರಕ್ಷಣೆ
ಹೊಸದಿಲ್ಲಿ, ಆ.26: ಹೆತ್ತವರು ತ್ಯಜಿಸಿದ ಬಳಿಕ ನಾಲ್ಕು ದಿನಗಳ ಕಾಲ ಅನ್ನ ನೀರಿಲ್ಲದೆ ನರಳಿದ ಇಬ್ಬರು ಮಕ್ಕಳನ್ನು ಹೊರ ದಿಲ್ಲಿಯ ಸಮಯಪುರ ಬಾಡ್ಲಿಯ ಮನೆಯೊಂದರಿಂದ ಕಳೆದ ವಾರ ರಕ್ಷಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ತಾಯಿ ರೋಸಿ ಎಂಬಾಕೆ ಎರಡು ತಿಂಗಳ ಹಿಂದೆ ತನ್ನ 5ರ ಹರೆಯದ ಇನ್ನೊಂದು ಮಗುವಿನೊಂದಿಗೆ ಮನೆ ಬಿಟ್ಟಿದ್ದಳು. ತಂದೆ ಬಬ್ಲು ಎಂಬಾತ ಆ.15ರಂದು ಎಲ್ಲಿಗೋ ಹೋಗಿದ್ದನು. ಆತ ನಿರುದ್ಯೋಗಿ ಹಾಗೂ ಕುಡುಕನೆಂದು ಅವರು ಹೇಳಿದ್ದಾರೆ.
ಆ.19ರಂದು ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ 8ರ ಹರೆಯದ ಅಲ್ಕಾ ಹಾಗೂ ಮೂರರ ಹರೆಯದ ಜ್ಯೋತಿ ಎಂಬ ಮಕ್ಕಳನ್ನು ರಕ್ಷಿಸಲಾಗಿದೆ. ಹಸಿವು ಬಾಯಾರಿಕೆಗಳಿಂದ ಕಂಗೆಟ್ಟಿದ್ದ ಅವರು ಸಣ್ಣ ಕೋಣೆಯೊಂದರಲ್ಲಿ ಶಿಥಿಲ ಮಂಚವೊಂದರ ಮೇಲೆ ಮುದುಡಿಕೊಂಡು ಮಲಗಿದ್ದರು. ಅವರ ತಲೆಗಳಲ್ಲಿ ಕ್ರಿಮಿ ಕೀಟಗಳ ಕಡಿತದಿಂದ ಸೋಂಕು ಉಂಟಾಗಿತ್ತು. ಪೊಲೀಸರು ಪ್ರಕರಣ ಕುರಿತು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಕಳುಹಿಸಿದ್ದಾರೆ. ಬಾಲಕಿಯರಿಬ್ಬರನ್ನೂ ಆರೋಗ್ಯ ಸುಧಾರಿಸುವ ವರೆಗೆ ಆಸ್ಪತ್ರೆಯಲ್ಲಿರಿಸಬೇಕು ಬಳಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೆಂದು ಸಮಿತಿ ನಿರ್ದೇಶನ ನೀಡಿದೆ.