ದಂಪತಿಯ ಬರ್ಬರ ಹತ್ಯೆ, ಯುವತಿಯರಿಬ್ಬರ ಮೇಲೆ ಅತ್ಯಾಚಾರ
ಚಂಡೀಗಡ,ಆ.26: ಅಪರಿಚಿತ ವ್ಯಕ್ತಿಗಳ ಗುಂಪೊಂದು ಮನೆಗೆ ನುಗ್ಗಿ ದಂಪತಿಯನ್ನು ಹತ್ಯೆಗೈದು ಅವರ ಸಂಬಂಧಿಗಳಾದ ಇಬ್ಬರು ಹದಿಹರೆಯದ ಯುವತಿಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಘಟನೆ ಹರ್ಯಾಣದ ಮೇವಾಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ನಡೆದಿದೆ.
ಮುಂಜಾನೆಯ ವೇಳೆ ದಿಗರ್‌ಹೆಡಿ ಗ್ರಾಮದಲ್ಲಿರುವ ಮನೆಗೆ ನುಗ್ಗಿದ ಗುಂಪು ಮೊದಲು ನಿದ್ರಿಸುತ್ತಿದ್ದ 40ರ ಹರೆಯದ ದಂಪತಿಯನ್ನು ಹರಿತವಾದ ಆಯುಧಗಳಿಂದ ಕಡಿದು ಕೊಲೆಗೈದ ನಂತರ ಇತರ ಆರು ಮಂದಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿತೆಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಗಾದವರಲ್ಲಿ 18 ಹಾಗೂ 19 ವರ್ಷದ ಇಬ್ಬರು ಯುವತಿಯರಿದ್ದು, ಅವರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಅವರು ಹೇಳಿದ್ದಾರೆ.
ದುಷ್ಕರ್ಮಿಗಳು ತಮ್ಮ ದುಪ್ಪಟ್ಟಗಳನ್ನು ಕಿತ್ತುಕೊಂಡು ಅವುಗಳಿಂದಲೇ ಮನೆಯಲ್ಲಿದ್ದ ಗಂಡಸರನ್ನು ಮಂಚಕ್ಕೆ ಕಟ್ಟಿ ಎಲ್ಲರ ಮೇಲೆ ಸಲಾಕೆಗಳು ಹಾಗೂ ದೊಣ್ಣೆಗಳಿಂದ ದಾಳಿ ನಡೆಸಿದರೆಂದು ಅತ್ಯಾಚಾರಕ್ಕೊಳಗಾದ ಯುವತಿಯರು ತಿಳಿಸಿದ್ದಾರೆ. ಹಂತಕರ ಬಳಿ ನಾಡ ಪಿಸ್ತೂಲ್‌ಗಳು ಇದ್ದವೆಂದು ಅವರು ಹೇಳಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸ್ ಅಧೀಕ್ಷಕ ಮೇವತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.