×
Ad

‘‘ನಾವೆಲ್ಲರೂ ಚಮರ್‌ಗಳೇ’’

Update: 2016-08-26 22:52 IST

‘‘ನಾವೆಲ್ಲರೂ ಚಮರ್‌ಗಳೇ’’ ಎಂದು ಹೀರಾಬಾಯ್ ಘೋಷಿಸುವಾಗ ಅವರ ಸುಕ್ಕುಗಟ್ಟಿದ ಮುಖದಲ್ಲಿ ಹೆಮ್ಮೆಯ ಭಾವ ಎದ್ದು ಕಾಣುತ್ತಿತ್ತು. ಅಹ್ಮದಾಬಾದ್‌ನ ನವಸರ್ಜನ್ ಕಚೇರಿಯನ್ನು ಪ್ರವೇಶಿಸಿದ ಹೀರಾಬಾಯ್ ಮತ್ತವರ ಯುವಪಡೆಯು ದಲಿತ ಗುಜರಾತ್‌ನ ಆ ಕ್ಷಣದ ನಾಯಕರಾಗಿದ್ದರು. ಅವರು ಉತ್ಸುಕ ಮತ್ತು ಆಶಾವಾದಿಗಳಾಗಿದ್ದರು. ಬಹುಶಃ ಭಯ ಅವರನ್ನು ಬಿಟ್ಟು ಹೋಗಿತ್ತು. ‘‘ನಮಗೆ ಪೆಟ್ಟು ತಿಂದು ಅಭ್ಯಾಸವಾಗಿ ಹೋಗಿದೆ’’ ಎಂದು ಗುಂಪಿನಲ್ಲಿ ಹಿರಿಯರಾದ ಮತ್ತು ಹೆಚ್ಚು ಅನುಭವ ಹೊಂದಿರುವ ಹೀರಾಬಾಯ್ ಹೇಳುತ್ತಾರೆ. ‘‘ನಮ್ಮ ತಂದೆ ಮತ್ತು ಅಜ್ಜಂದಿರು ಹೆಚ್ಚು ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಸತ್ತ ದನದ ಚರ್ಮ ಸುಲಿದುದಕ್ಕೆ ಥಳಿಸಿದ್ದು ಮಾತ್ರ ಅತ್ಯಂತ ದೊಡ್ಡ ಅನ್ಯಾಯ. ಇದು ಶತಮಾನಗಳಿಂದಲೂ ನಮ್ಮ ಉದ್ಯೋಗವಾಗಿದೆ. ಸತ್ತ ದನ ಅಥವಾ ಕೋಣದ ಚರ್ಮವನ್ನು ಇನ್ಯಾರು ಸುಲಿಯುತ್ತಾರೆ? ಹಳ್ಳಿಯಲ್ಲಿ ದನವೋ, ಆಡೋ ಅಥವಾ ನಾಯಿ ಅಥವಾ ಬೆಕ್ಕು ಸತ್ತಾಗ ಇವರ್ಯಾರನ್ನು ಕರೆಯುತ್ತಾರೆ?. ಪ್ರತೀ ಗ್ರಾಮದ ಮುಖ್ಯಸ್ಥರಲ್ಲಿ ಕೊಳೆತ ಶವಗಳನ್ನು ತೆಗೆಯುವ ನಮಗೆ ಮಾಹಿತಿ ನೀಡುವ ಸಲುವಾಗಿ ನಮ್ಮ ಮೊಬೈಲ್ ಸಂಖ್ಯೆಯಿದೆ. ಇಷ್ಟು ವರ್ಷ ಈ ಕೆಲಸವನ್ನು ನಾವು ಮಾಡದಿದ್ದರೆ ಅವರು ನಮಗೆ ಥಳಿಸುತ್ತಿದ್ದರು. ನಗರದಲ್ಲಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಓರ್ವ ದಲಿತ ವ್ಯಕ್ತಿ ತನ್ನ ಹಳ್ಳಿಗೆ ಬಂದಾಗ ಮೇಲ್ವರ್ಗದವರು ಆತನಿಗೆ ಬೆದರಿಕೆ ಹಾಕುತ್ತಿದ್ದರು ಎಂಬುದನ್ನು ನಾನು ಕೇಳಿದ್ದೆ. ನೀನು ನಗರದಲ್ಲಿ ಶಿಕ್ಷಕನೋ ಅಥವಾ ಮುಖ್ಯೋಪಾಧ್ಯಾಯನೋ ಆಗಿರಬಹುದು. ಆದರೆ ಇಲ್ಲಿ ನೀನು ಓರ್ವ ಚಮರ್. ನಾವು ಕೊಳೆತ ನಾಯಿಯನ್ನು ತೆಗೆ ಎಂದು ಹೇಳಿದರೆ ನೀನು ಕೇಳಬೇಕು ಎಂದವರು ಬೆದರಿಸಿದ್ದರು.’’

‘‘ಹಾಗಾಗಿ ಸತ್ತ ಪ್ರಾಣಿಗಳನ್ನು ನಾವು ತೆಗೆಯದಿದ್ದರೆ ಅವರು ನಮಗೆ ಥಳಿಸುತ್ತಿದ್ದರು. ಈಗ ಅವರು ಸತ್ತ ದನ ಮತ್ತು ಕೋಣಗಳನ್ನು ತೆಗೆಯುವಂತೆ ಹೇಳುತ್ತಾರೆ. ಮತ್ತೆ ಗೋರಕ್ಷಕರು ನಮ್ಮನ್ನು ತಡೆದು ಥಳಿಸುತ್ತಾರೆ.’’ ‘‘ಎಲ್ಲವೂ ಹಣಕ್ಕೋಸ್ಕರ. ಅವರು ನಮ್ಮಿಂದ ಹಣವನ್ನು ಕೀಳಲು ಪ್ರಯತ್ನಿಸುತ್ತಾರೆ. ಅವರು ಕೇಳಿದಷ್ಟು ಹಣ ನೀಡಲು ಸಾಧ್ಯವಾದರೆ ಅವರು ನಮ್ಮನ್ನು ಹೋಗಲು ಬಿಡುತ್ತಾರೆ. ಆದರೆ ಹೀಗೆ ಲಂಚವನ್ನೇ ನೀಡುತ್ತಾ ಹೋದರೆ ನಾವು ಬದುಕು ವುದಾದರೂ ಹೇಗೆ? ಜೈನರು, ಹಿಂದೂಗಳು, ಹಿಂದುಳಿದ ದನಗಾಹಿಗಳು ಎಲ್ಲರೂ ನಮ್ಮನ್ನು ಕರೆಯುತ್ತಾರೆ. ನಾವು ಅವರ ಸತ್ತ ಪ್ರಾಣಿಯನ್ನು ತೆಗೆಯುವಾಗ ಧರ್ಮಾನುಸಾರ ಏನನ್ನಾದರೂ ನೀಡಿ ಎಂದು ಹೇಳುತ್ತಾರೆ. ನಾವು ನಮ್ಮ ಕೈಗಳನ್ನು ನಮ್ಮ ಜೇಬಿನೊಳಗೆ ಹಾಕಲೇ ಬೇಕಾಗುತ್ತದೆ. ಅವರು ನಾವು ನೀಡಿದ ಹಣದ ಮೇಲೆ ನೀರನ್ನು ಚಿಮುಕಿಸಿ ಚಮರ್‌ಗಳ ಮಾಲಿನ್ಯದಿಂದ ಅದನ್ನು ಮುಕ್ತಗೊಳಿಸುತ್ತಾರೆ. ಆದರೂ ಅವರಿಗೆ ನಾವು ನೀಡುವ ಹಣ ಬೇಕು.’’

ಇತ್ತೀಚಿನ ವರ್ಷಗಳಲ್ಲಿ ಹೀರಾಬಾಯ್‌ಯನ್ನು ಎರಡು ಬಾರಿ ತಡೆದು ಥಳಿಸಲಾಗಿದೆ. ‘‘ಒಮ್ಮೆ ನಾನು ಪ್ರಾಣಿಯ ಚರ್ಮವನ್ನು ಸಾಗಾಟ ಮಾಡುತ್ತಿದ್ದಾಗ ನನ್ನನ್ನು ಲಿಮ್ಡಿ ಬಳಿ ತಡೆದು ನಿಲ್ಲಿಸಲಾಗಿತ್ತು ಮತ್ತೊಂದು ಬಾರಿ ಕೆಲವು ಸತ್ತ ಪ್ರಾಣಿಗಳ ಶವಗಳನ್ನು ಸಾಗಾಟ ಮಾಡುತ್ತಿದ್ದಾಗ ವಧ್ವಾನ್‌ನಲ್ಲಿ ತಡೆಯಲಾಗಿತ್ತು. ಅವರು ನನ್ನ ಪಿಕ್ ಅಪ್ ವಾಹನವನ್ನು ಪಲ್ಟಿ ಮಾಡಿದ್ದರು. ಗಾಜುಗಳನ್ನು ಪುಡಿಗೈದಿದ್ದರು. ಕಬ್ಬಿಣದ ಸಲಾಕೆಯಿಂದ ವಾಹನವನ್ನು ಜಖಂಗೊಳಿಸಿದ್ದರು. ಗೋರಕ್ಷಕರ ಚಳವಳಿಗೆ ಪ್ರಧಾನಿಯವರ ಆಶೀರ್ವಾದ ಸಿಕ್ಕ ನಂತರ ನಾವಿಲ್ಲಿ ಕಷ್ಟಕ್ಕೊಳಗಾಗಿದ್ದೇವೆ.’’

‘‘ಗುಜರಾತ್‌ನಲ್ಲಿ ಸುಮಾರು 200ರಷ್ಟು ಗೋಶಾಲೆಗಳಿವೆ. ಇಲ್ಲಿನ ಮಾಲಕರು ಸತ್ತ ದನಗಳನ್ನು ತೆಗೆಯಲು ನಮ್ಮನ್ನು ಕರೆಯುತ್ತಾರೆ. ಆದರೆ ಅವರು ಇದಕ್ಕೆ ಟೆಂಡರ್ ಕರೆಯುತ್ತಾರೆ. ಆ ಗುತ್ತಿಗೆ ನಮಗೆ ಸಿಗಲು ನಾವು ವಾರ್ಷಿಕ ರೂ 8 ಲಕ್ಷ ಪಾವತಿಸಬೇಕಾಗುತ್ತದೆ. ಇದಕ್ಕೆ ದೊಡ್ಡ ಸ್ಪರ್ಧೆಯೇ ನಡೆಯುತ್ತದೆ. ಗೋಶಾಲೆಯ ಮಾಲಕರು ಹೆಚ್ಚು ಹಣ ಗಳಿಸುವ ಸಲುವಾಗಿ ಎರಡು ಅಥವಾ ಮೂರು ದಲಿತ ಗುತ್ತಿಗೆದಾರರನ್ನು ಆಯ್ಕೆ ಮಾಡುತ್ತಾರೆ.’’ ‘‘ಖಂಡಿತವಾಗಿಯೂ, ಸ್ಥಳೀಯ ದಲಿತರು ಕಡಿಮೆ ದರವನ್ನು ಪಾವತಿಸಲು ಪ್ರಯತ್ನಿಸುತ್ತಾರೆ. ನಂತರ ಈ ಮಾಲಕರು ಕೆಲವು ಮುಸ್ಲಿಂ ವ್ಯಾಪಾರಿಗಳನ್ನು ಕರೆದು ಹೆಚ್ಚಿನ ದರವನ್ನು ಪಡೆಯುತ್ತಾರೆ. ಹಾಗಾಗಿ ಈ ಒಪ್ಪಂದದ ಸಂದರ್ಭದಲ್ಲಿ ಯಾವಾಗಲೂ ಒಂದು ರೀತಿಯ ಆಕ್ರೋಶ ಮತ್ತು ಉದ್ವಿಗ್ನತೆ ಇರುತ್ತದೆ. ಮುಸ್ಲಿಮರು, ಪಟೇಲರು ಮತ್ತು ಬ್ರಾಹ್ಮಣರು ಈ ಟೆಂಡರ್‌ಗಾಗಿ ಸ್ಪರ್ಸುತ್ತಾರೆ. ಅವರು ಅತ್ಯಂತ ಬಡ ಮತ್ತು ಕುಡುಕ ಚಮರ್‌ಗಳನ್ನು ಹುಡುಕಿ ಅವರಿಗೆ ಕುಡಿಯಲು ಮದ್ಯ ಮತ್ತು ಸ್ವಲ್ಪಹಣ ನೀಡಿ ಪ್ರಾಣಿಗಳ ಚರ್ಮವನ್ನು ಸುಲಿಸುತ್ತಾರೆ. ನಾವು ಕೆಲಸ ಮಾಡುತ್ತೇವೆ ಅವರು ಲಾಭವನ್ನು ಗಳಿಸುತ್ತಾರೆ. ಆದರೆ ನಾವು ಸತ್ತ ಪ್ರಾಣಿಗಳ ದೊಡ್ಡ ವ್ಯವಹಾರವನ್ನು ಪಡೆಯುವುದು ಅವರಿಗೆ ಬೇಕಾಗಿಲ್ಲ. ಈ ಬೂಟಾಟಿಕೆ ನಮಗೆ ಸಾಕಾಗಿ ಹೋಗಿದೆ.’’

‘‘ಅವರು ಮತ್ತೆ ಮತ್ತೆ ನನ್ನಲ್ಲಿ ಹೇಳುತ್ತಾ ಹೋಗುತ್ತಾರೆ. ಕೆಲವು ದನಗಳ ಹೊಟ್ಟೆ ಯಲ್ಲಿ ಒಂದು ರೀತಿಯ ಕಲ್ಲಿರುತ್ತದೆ. ನನಗನಿಸುವ ಹಾಗೆ ನಾವದನ್ನು ಗೋರೊಚನಾ ಎಂದು ಕರೆಯುತ್ತೇವೆ. ಅದಕ್ಕೆ ಐದರಿಂದ ಏಳು ಸಾವಿರ ರೂ. ಬೆಲೆಯಿದೆ. ಅದನ್ನು ಆಯುರ್ವೇದ ಔಷಯಲ್ಲಿ ಬಳಸಲಾಗುತ್ತದೆ....’’ ಎಂದು ಹೇಳುತ್ತಾ ನಗುತ್ತಾರೆ. ‘‘ಬಾಬಾ ರಾಮ್‌ದೇವ್ ಅವರನ್ನು ಕೇಳಿ. ಬಹುಶಃ ಅವರು ತಮ್ಮ ಔಷಯಲ್ಲಿ ಅದನ್ನು ಬಳಸಬಹುದು. ಒಂದು ಸತ್ತ ದನ ಸಾವಿರಾರು ರೂ. ಬೆಲೆಬಾಳುತ್ತದೆ. ಅದರ ಚರ್ಮವನ್ನು ಶೂ, ಬ್ಯಾಗ್, ಬೆಲ್ಟ್, ದುಬಾರಿ ಕಾರ್‌ಗಳ ಸೀಟ್, ಚರ್ಮದ ಸೋಾ ಮುಂತಾದುವುಗಳಿಗೆ ಬಳಸಲಾಗುತ್ತದೆ. ಕೊಂಬನ್ನು ಆಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೂದಲನ್ನು ದುಬಾರಿ ಬ್ರಶ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಕಾಲಿನ ಗೊರಸನ್ನು ರ್ತು ಮಾಡಲಾಗುತ್ತದೆ. ಎಲುಬುಗಳನ್ನು ಪುಡಿ ಮಾಡಲಾಗುತ್ತದೆ ಮತ್ತು ಬೋನ್‌ಚೀನಾಕ್ಕಾಗಿ ರ್ತು ಮಾಡಲಾಗುತ್ತದೆ ಮತ್ತು ದುಬಾರಿ ಮಡಕೆಗಳ ತಯಾರಿಕೆಗೆ ರಾಜಸ್ಥಾನಕ್ಕೆ ಕಳುಹಿಸಲಾಗುತ್ತದೆ.’’ ‘‘ಬೇಯಿಸಿದ ಮಾಂಸವನ್ನು ಕೋಳಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಆನಂದ್‌ನಲ್ಲಿ ಔಷ ತಯಾರಿಕೆ ಮತ್ತು ಖಾದ್ಯ ತಯಾರಿಕೆಗಾಗಿ ಜೆಲಟಿನ್‌ಗಳನ್ನು ತಯಾರಿಸಲಾಗುತ್ತದೆ. ಈ ಜೆಲಟಿನ್‌ಗಳನ್ನು ವಡೋದರದಲ್ಲಿ ತಯಾರಿಸಲಾಗುತ್ತದೆ. ಎಲ್ಲಾ ಸಸ್ಯಾಹಾರಿಗಳು ಕೂಡಾ ಈ ಎಲ್ಲಾ ವಸ್ತುಗಳನ್ನು ಔಷ ಅಥವಾ ಆಹಾರದ ರೂಪದಲ್ಲಿ ಸೇವಿಸುತ್ತಾರೆ. ಆದರೆ ಅವರು ಗೊತ್ತಿಲ್ಲದವರಂತೆ ನಾಟಕವಾಡುತ್ತಾರೆ.’’ ಸ್ವಲ್ಪಸಂಶಯ ಉಂಟಾಗಿ ನಾನು ವಡೋದರದ ಸ್ಟರ್ಲಿಂಗ್ ಬಗ್ಗೆ ಗೂಗಲ್‌ನಲ್ಲಿ ಹುಡುಕಿದೆ. ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯವಾಗಿತ್ತು. ಸಮಾಧಾನದಿಂದ ಮಗುವಿಗೆ ಹೇಳುವಂತೆ, ‘‘ಅಕ್ಕಾ, ಎಲ್ಲಾ ಪ್ರಾಣಿಗಳ ಎಲುಬುಗಳು ಕೂಡಾ ವಿವಿಧ ವಸ್ತುಗಳ ತಯಾರಿಕೆಗಾಗಿ ಈ ಕಾರ್ಖಾನೆಗಳಿಗೇ ಬರುವುದು ಮತ್ತು ಎಲ್ಲರೂ ಅವುಗಳನ್ನು ಬಳಸುತ್ತಾರೆ.’’

ನಟ್ಟುಬಾಯ್ ಮಧ್ಯದಲ್ಲಿ ಮಾತನಾಡಿದರು. ನಟ್ಟು ನನಗೆ 1997ರಿಂದಲೇ ಪರಿಚಯ, ಆಗ ಅವರು ರಾಜ್ಯದಲ್ಲಿ ಹರಡಿರುವ ಮಾನವ ಚರಂಡಿ ಸ್ವಚ್ಛತೆಯ ಬಗ್ಗೆ ವರದಿ ತಯಾರಿಸುವಲ್ಲಿ ನೆರವಾಗಿದ್ದರು. ಅವರ ಜೀವನ ಕತೆ ಅದ್ಭುತವಾಗಿದೆ. ಅವರು 8ನೆ ವಯಸ್ಸಿರುವಾಗಲೇ ಹಣ ಗಳಿಸಲು ಶೂ ಪಾಲಿಶ್ ಮಾಡುವ ಸಲುವಾಗಿ ರೈಲುಗಳಿಗೆ ಹಾರುವುದನ್ನು ಆರಂಭಿಸಿದ್ದರು. ನಂತರ ಅವರು ಸರ್ಕೇಜಾದಲ್ಲಿ ಸಿನಿಮಾ ಮಂದಿರಗಳ ಹೊರಗೆ ಕುಳಿತು ಶೂ ಪಾಲಿಶ್ ಮಾಡಲು ಆರಂಭಿಸಿದರು. ನಂತರ ಗದ್ದೆಗಳಿಂದ ಚರ್ಮ ಸುಲಿಯುವ ಕೇಂದ್ರಗಳಿಗೆ ಸಾಗಿಸಲು ಸತ್ತ ದನಗಳನ್ನು ಕಂಬಕ್ಕೆ ಕಟ್ಟುವಲ್ಲಿ ತಂದೆಗೆ ನೆರವಾಗಲು ಆರಂಭಿಸಿದರು. ನಂತರ 10ನೆ ವಯಸ್ಸಿನಲ್ಲಿ ಚರ್ಮಸಂಸ್ಕರಣೆಯ ಕೆಲಸವನ್ನು ಆರಂಭಿಸಿದರು. 1997ರಲ್ಲಿ ನವಸರ್ಜನ್ ಟ್ರಸ್ಟ್ ಸೇರಿಕೊಂಡ ಅವರು ದಲಿತರ ಹಕ್ಕಿಗಾಗಿ ಕೆಲಸ ಮಾಡಲು ಆರಂಭಿಸಿದರು. ‘‘2014ರಲ್ಲಿ ದನಗಳು ತ್ಯಾಜ್ಯವಸ್ತುಗಳಲ್ಲಿರುವ ಪ್ಲಾಸ್ಟಿಕ್‌ಗಳನ್ನು ತಿಂದು ಸಾವನ್ನಪ್ಪುವ ಬಗ್ಗೆ ನಾವು ಚಮರ್‌ಗಳು ಗಮನ ಸೆಳೆದಿದ್ದೆವು’’ ಎಂದು ನಟ್ಟುಬಾಯ್ ಹೇಳಿದರು. ‘‘ಇದರ ಪರಿಣಾಮ ಏನಾಯಿತು?’’ ನಾನು ಕೇಳಿದೆ. ‘‘ಕಲೆಕ್ಟರ್ ನಗರಪಾಲಿಕೆಗೆ ಪತ್ರ ಬರೆದರು. ಎರಡು ದಿನಗಳ ಕಾಲ ನಾವು ಬಹಳಷ್ಟು ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿದೆವು ಮತ್ತು ಪ್ಲಾಸ್ಟಿಕ್ ಮಾಲಿನ್ಯ ವಿರೋ ಅಭಿಯಾನವನ್ನು ಆರಂಭಿಸಿದೆವು. ಆದರೆ ಅದರಿಂದೇನೂ ಆಗಲಿಲ್ಲ.’’ ನಟ್ಟು ತನ್ನ ಜನರಿಗಾಗಿ ಅನೇಕ ಹೋರಾಟಗಳನ್ನು ಮಾಡಿರುವ ಕಾರಣ ಅವರ ಆತ್ಮಬಲ ಹೆಚ್ಚಿದೆ ಮತ್ತು ಈಗ ಅವರು ತನ್ನ ಸಮುದಾಯದ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘‘ನಾವೆಲ್ಲರೂ ಕುಳಿತು ಉನಾದಲ್ಲಿ ಆ ನಾಲ್ಕು ಯುವಕರಿಗೆ ಥಳಿಸುತ್ತಿದ್ದ ದೃಶ್ಯಾವಳಿಗಳನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಇದರಿಂದ ಆಕ್ರೋಶ ಮತ್ತು ದುರ್ಬಲತೆಗೆ ಒಳಗಾದ ನಾವು ಈ ಬಗ್ಗೆ ಏನಾದರೂ ಮಾಡಬೇಕೆಂದು ಯೋಚಿಸಿದೆವು. ಆಗ ಉಪಾಯ ಹೊಳೆಯಿತು. ನಾವು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಅವರ ತಾಯಂದಿರನ್ನು ಅವರಿಗೇ ವಾಪಸ್ ಕೊಡಿ. ಅವರ ಅಂತ್ಯಕ್ರಿಯೆಯನ್ನು ಅವರೇ ಮಾಡಲಿ. ಹಾಗಾಗಿ ಮೂರು ನಾಲ್ಕು ದನಗಳ ಮೃತದೇಹಗಳನ್ನು ವಾಹನದಲ್ಲಿ ಹಾಕಿ ಕೊಂಡೊಯ್ದು ಜಿಲ್ಲಾಕಾರಿ ಕಚೇರಿ ಮುಂದೆ ಎಸೆದು ಬಂದೆವು. ನಿಮ್ಮ ತಾಯಿಯನ್ನು ನೀವೇ ತೆಗೆದುಕೊಳ್ಳಿ’’ ಎಂದು
ಇದು ದಲಿತರು ನಡೆಸಿದ ಏಕೈಕ, ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪ್ರತಿಭಟನೆ. ಮತ್ತದರ ಪರಿಣಾಮ ಬಹಳ ದೊಡ್ಡದು.

ಇತರ ಪ್ರದೇಶಗಳಲ್ಲೂ ಇದೇ ರೀತಿ ನಡೆದು, ಅವರೊಂದು ಇತಿಹಾಸವನ್ನೇ ನಿರ್ಮಿಸಿದರು. ಈಗ ಈ ಗುಂಪು ತಮ್ಮ ಸಮುದಾಯದಿಂದ ಮತ್ತಷ್ಟು ಜನರನ್ನು ಒಟ್ಟು ಗೂಡಿಸುತ್ತಿದೆ. ಅವರು ಚರ್ಮ ಉದ್ಯೋಗಿಗಳ ಸಂಘಟನೆಯನ್ನು ಆರಂಭಿಸಲಿದ್ದಾರೆ ಮತ್ತು ಸರಕಾರದ ಮುಂದೆ ಈ ಕೆಳಗಿನ ಬೇಡಿಕೆಯನ್ನು ಇಡಲಿದ್ದಾರೆ. * ಮುಚ್ಚಲ್ಪಟ್ಟಿರುವ ಗುಜರಾತ್ ಚರ್ಮ ಕೈಗಾರಿಕಾಭಿವೃದ್ಧಿ ಮಂಡಳಿಯನ್ನು ಮರುಆರಂಭಿಸಬೇಕು ಮತ್ತು ತಮ್ಮ ವ್ಯವಹಾರಗಳನ್ನು ನಡೆಸುವ ಸಲುವಾಗಿ ಚರ್ಮಸಂಸ್ಕರಣೆ ಮಾಡುವವರಿಗೆ ಅಗತ್ಯ ಸಾಧನವನ್ನು ಪೂರೈಸಲು ಆರ್ಥಿಕ ಬೆಂಬಲವನ್ನು ಬಜೆಟ್‌ನಲ್ಲಿ ವಿಶೇಷವಾಗಿ ಕಾಯ್ದಿರಿಸಬೇಕು. * ಮೃತದೇಹಗಳನ್ನು ತೆಗೆಯಲು ಗ್ರಾಮೀಣ ಪ್ರದೇಶಗಳಲ್ಲಿ ಜಮೀನನ್ನು ಒದಗಿಸಬೇಕು ಮತ್ತು ಗೋರಕ್ಷಕರಿಂದ ರಕ್ಷಣೆಗಾಗಿ ಜಮೀನಿನ ಸುತ್ತ ಎತ್ತರದ ಗೋಡೆಗಳನ್ನು ನಿರ್ಮಿಸಬೇಕು.
* ಆಟೊರಿಕ್ಷಾ ಮತ್ತು ಪಿಕ್‌ಅಪ್ ವಾಹನಗಳನ್ನು ಖರೀದಿಸಲು ವಾಹನ ತೆರಿಗೆಯಿಲ್ಲದ ವಾಹನಸಾಲವನ್ನು ಒದಗಿಸಬೇಕು.
* ಪೊಲೀಸರು ಅಥವಾ ಗೋರಕ್ಷಕರು ತಡೆಯದಂತೆ ಮತ್ತು ದೈಹಿಕವಾಗಿ ಹಲ್ಲೆ ನಡೆಸದಂತೆ ಗುರುತು ಚೀಟಿ ಮತ್ತು ಅನುಮತಿ ಪತ್ರವನ್ನು ಒದಗಿಸಬೇಕು
* ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ನೀಡುವ ಸಾಲ ಮತ್ತು ವಿದ್ಯಾರ್ಥಿವೇತನವನ್ನು ಸರಕಾರ ಹೆಚ್ಚಿಸಬೇಕು, ಸರಕಾರ ನಮ್ಮ ಜನರ ಸಮೀಕ್ಷೆಯನ್ನು ನಡೆಸಿ ಚರ್ಮಸಂಸ್ಕರಣಾ ಕೆಲಸವನ್ನು ತ್ಯಜಿಸಿದ್ದಕ್ಕೆ ಜಮೀನನ್ನು ನೀಡಬೇಕು ಮತ್ತವರ ಪುನರ್ವಸತಿಗೆ ಸಹಕರಿಸಬೇಕು.
* ಗೋಶಾಲೆಗಳು ನಮ್ಮ ಕೆಲಸಕ್ಕೆ ಸಂಬಂಧಪಟ್ಟಂಥವಾಗಿವೆ. ಹಾಗಾಗಿ ಅವುಗಳ ಜವಾಬ್ದಾರಿಯನ್ನು ನಮಗೆ ನೀಡಿ ಯಾಕೆಂದರೆ ನಾವೇ ನಿಜವಾದ ಗೋಸೇವಕರು. ಈಗಿರುವ ಜನರು ಸರಕಾರದ ಸಹಾಯಧನವನ್ನು ಪಡೆಯುತ್ತಾರೆ ಆದರೆ ದನಗಳನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸುತ್ತಾರೆ.

ಅವರು ತಮ್ಮ ಜಮೀನು ಅಥವಾ ಗೋಶಾಲೆಗಳನ್ನು ಪಡೆದುಕೊಳ್ಳುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆ. ಆದರೆ ಒಂದು ಮಾತಂತೂ ಸತ್ಯ. ಗುಜರಾತ್‌ನ ದಲಿತರಿಗೆ ಅವರು ಅಭಿಯಾನದ ಮೂಲಕ ಸೂರ್ತಿ ತುಂಬಿದ್ದಾರೆ ಮತ್ತು ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

Writer - ಮೇರಿ ಮಾರ್ಸೆಲ್ ತಕೀಕರ

contributor

Editor - ಮೇರಿ ಮಾರ್ಸೆಲ್ ತಕೀಕರ

contributor

Similar News