ಇಟಲಿ ಭೂಕಂಪ ಸಂತ್ರಸ್ತರ ನೆರವಿಗೆ ಬಂದ ಆಫ್ರಿಕನ್ ಮುಸ್ಲಿಂ ನಿರಾಶ್ರಿತರು

Update: 2016-08-27 03:08 GMT

ಇಟಲಿ, ಆ.27: ಆಫ್ರಿಕನ್ ಮುಸ್ಲಿಂ ನಿರಾಶ್ರಿತರು ಇದೀಗ ಇಟಲಿಯಲ್ಲಿ ಹೊಸ ಬದುಕು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು, ಮೆಡಿಟರೇನಿಯನ್ ಸಮುದ್ರ ದಾಟಿ, ಬುಧವಾರದ ಭೀಕರ ಭೂಕಂಪದಿಂದ ತತ್ತರಿಸಿರುವ ಇಟಲಿಯ ಜನತೆಗೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.

ಕಡುಕಿತ್ತಳೆ ಬಣ್ಣದ ಮೇಲುಡುಪಿನ ಸುಮಾರು 50 ಮಂದಿ ಸ್ವಯಂಸೇವಕರ ತಂಡ 50 ಕಿಲೋಮೀಟರ್ ದೂರದ ತಾತ್ಕಾಲಿಕ ಹಾಸ್ಟೆಲ್‌ಗಳಿಂದ ಆಗಮಿಸಿ ಇತರ ಸ್ವಯಂಸೇವಕರ ಜತೆ ಸೇರಿಕೊಂಡಿದ್ದಾರೆ. "ನಾನು ಇಲ್ಲಿನ ಜನತೆಗೆ ನೆರವಾಗಲು ಬಂದಿದ್ದೇವೆ" ಎಂದು ಪಶ್ಚಿಮ ಆಫ್ರಿಕಾದ ಬೆನಿನ್‌ನ 20 ವರ್ಷದ ಅಬ್ದುಲ್ಲಾ ಹೇಳುತ್ತಾರೆ.

"ಜನ ತಮ್ಮ ಜೀವ ಕಳೆದುಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಮತ್ತು ಅವರ ಘನತೆಗೆ ಗೌರವ ತೋರಿಸುವ ಸಲುವಾಗಿ ಸಹಾಯಹಸ್ತ ಚಾಚುತ್ತಿದ್ದೇವೆ" ಎಂದು ಭೂಕಂಪದಿಂದ ಧ್ವಂಸಗೊಂಡಿರುವ ಪೆಸ್ಕರಾ ಡೆಲ್ ಟೊರಂಟೊದ ಹೊರಗೆ ಮಾತನಾಡಿದ ಅವರು ಹೇಳಿದರು.

ಸುಮಾರು 20 ಮಂದಿ ಸ್ವಯಂಸೇವಕರ ಒಂದು ತಂಡ, ಡೇರೆಗಳನ್ನು ಸಿದ್ಧಪಡಿಸಲು ನೆಲ ಹಸನು ಮಾಡುವ ಕಾರ್ಯದಲ್ಲಿ ತೊಡಗಿದೆ. ಜತೆಗೆ ಹೆಲಿಕಾಪ್ಟರ್ ಇಳಿಯಲು ಬಯಲು ನಿರ್ಮಿಸಿದೆ. ಬಿಡುವಿನ ವೇಳೆ ಎಲ್ಲ ಮುಸ್ಲಿಂ ಸ್ವಯಂಸೇವಕರು ಒಂದು ಡೇರೆ ಬಳಿ ಸೇರಿ ಪ್ರಾರ್ಥನೆ ಸಲ್ಲಿಸುತ್ತಾರೆ.

"ಇದು ಅವರದ್ದೇ ಯೋಚನೆ. ಏನಾದರೂ ಮಾಡಬೇಕು ಎಂಬ ಇಚ್ಛೆ ಅವರದ್ದು. ಅವರಿಗೆ ಅದನ್ನು ಕಾರ್ಯಗತಗೊಳಿಸಲು ನಾವು ನೆರವಾಗಿದ್ದೇವೆ" ಎಂದು ಹ್ಯೂಮನ್ ಸಾಲಿಡಾರಿಟಿ ಗ್ರೂಪ್‌ನ ಲೆಟಿಝಾ ಡೆಲ್ಲಾಬಾರ್ಬ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News