×
Ad

ಕೇರಳ: ಬೀದಿನಾಯಿ ಪ್ರೇಮದ ಹಿಂದೆ ಔಷಧ ಕಂಪೆನಿಗಳ ಲಾಬಿ?

Update: 2016-08-27 12:12 IST

ಕೊಚ್ಚಿ,ಆಗಸ್ಟ್ 27: ಹಕ್ಕಿಜ್ವರದ ಕಾಲದಲ್ಲಿ ಬಾತುಕೋಳಿಗಳನ್ನು ಸಾಮೂಹಿಕವಾಗಿ ಕೊಂದಾಗ ಯಾರೂ ಪ್ರಶ್ನಿಸಲಿಲ್ಲ. ಮದ್ದಾನೆಗಳನ್ನು ಗುಂಡಿಟ್ಟು ಸಾಯಿಸಿದಾಗಲೂ ಯಾರೂ ವಿರೋಧಿಸಲಿಲ್ಲ. ಊರಿಗಿಳಿಯುವ ಹುಲಿ,ಚಿರತೆಗಳನ್ನು ಕೊಂದಾಗಲೂ ಯಾರು ಕೇಳಲಿಲ್ಲ. ಆದರೆ ಬೀದಿ ನಾಯಿಗಳನ್ನುಮಾತ್ರ ವಿರೋಧ ಕೇಳಿಸಿಕೊಳ್ಳುತ್ತಿರುವುದು ಯಾಕೆ? ಕೇರಳದಲ್ಲೀಗ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಪ್ರಶ್ನೆಯಿದು ಎಂದು ವರದಿಯಾಗಿದೆ. ಇದಕ್ಕೆ ಉತ್ತರವನ್ನೂ ಅವರೇ ಹೇಳುತ್ತಾರೆ. ಬೀದಿನಾಯಿಗಳಿಗೆ ಕೊಡುವ ವ್ಯಾಕ್ಸಿನ್‌ನಿಂದ ಸಿಗುವ ಲಾಭವೇ ಇದಕ್ಕೆ ಕಾರಣವಾಗಿದೆ. ಬೀದಿನಾಯಿ ಸಂರಕ್ಷಣೆಯ ಹಿಂದೆ ಔಷಧ ಮಾಫಿಯಾ ಇದೆ ಎಂದು ಜನರೆಡೆಯಲ್ಲಿ ಚರ್ಚೆಯಾಗುತ್ತಿದೆ. ಎರಡು ವರ್ಷ ಮೊದಲು ದಿಲ್ಲಿಯಲ್ಲಿ ಇಂತಹ ಔಷಧ ಕಂಪೆನಿ ಮುಖ್ಯಸ್ಥರು ಭಾಗವಹಿಸಿದ್ದ ಸಭೆಯಲ್ಲಿ ಜಗತ್ತಿನಲ್ಲಿ ಭಾರತ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಅಮೆರಿಕದ ಔಷಧ ಕಂಪೆನಿ ವಕ್ತಾರ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಅಂದು 104 ದಶಲಕ್ಷ ಅಮೆರಿಕನ್ ಡಾಲರ್(ಸುಮಾರು 6750 ಕೋಟಿ ರೂ.) ಆಂಟಿ ರ್ಯಾಬೀಸ್ ವ್ಯಾಕ್ಸಿನ್ ಪ್ರತಿವರ್ಷ ಭಾರತದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಲಾಗಿತ್ತು. ಇಂದು ಅದು ಎಂಟುನೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವ್ಯವಹಾರವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುವ ಈ ಔಷಧಗಳಲ್ಲಿ ಬಹುಪಾಲು ಕೇಂದ್ರ-ರಾಜ್ಯ ಸರಕಾರಗಳ ಆಸ್ಪತ್ರೆಗಳಿಗೆ ಸರಬರಾಜಾಗುತ್ತದೆ. ಉಳಿದವು ಖಾಸಗಿ ಆಸ್ಪತ್ರೆಗಳು ಖರೀದಿಸುತ್ತಿವೆ.ಮೂರು ಪ್ರಮುಖ ಕಂಪೆನಿಗಳು ಭಾರತಕ್ಕೆ ಈ ಔಷಧ ಸರಬರಾಜು ಮಾಡುತ್ತಿವೆ. ಹುಚ್ಚುನಾಯಿಕಡಿತದಿಂದ ಸಂಭವಿಸುವ ಸಾವುಗಳಲ್ಲಿ ಶೇ. 40ರಷ್ಟು ಭಾರತದಲ್ಲಿಯೇ ಸಂಭವಿಸುತ್ತಿವೆ. ಇಂಡಿಯನ್ ಜರ್ನಲ್‌ಆಫ್‌ಮೆಡಿಕಲ್ ರಿಸರ್ಚ್ ಪ್ರಕಟಿಸಿದ ಲೆಕ್ಕಪ್ರಕಾರ ಭಾರತದಲ್ಲಿ ಒಂದು ಕೋಟಿ ಎಪ್ಪತ್ತೈದು ಲಕ್ಷ ಮಂದಿಗೆ ಪ್ರತಿವರ್ಷ ನಾಯಿಕಡಿತ ಆಗುತ್ತಿದೆ.

ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸರಾಸರಿ 20,000 ಮಂದಿ ಮೃತರಾಗುತ್ತಿದ್ದಾರೆ. ಕೇರಳದಲ್ಲಿ ಕಳೆದ ವರ್ಷ ಒಂದೂವರೆ ಲಕ್ಷ ಮಂದಿ ಬೀದಿನಾಯಿಕಡಿತಕ್ಕೊಳಗಾಗಿದ್ದಾರೆ. ನಾಯಿ ಕಚ್ಚಿ 24 ಗಂಟೆಗಳೊಳಗೆ ಆಂಟಿ ರ್ಯಾಬೀಸ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕೆಂದು ವೈದ್ಯರ ಶಿಫಾರಸು ಇದೆ. ಹುಚ್ಚು ನಾಯಿಆಗಿದ್ದರೆ ಕೂಡಲೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಖಾಸಗಿ ಮಾರುಕಟ್ಟೆಯಲ್ಲಿ ಇದರ ಒಂದು ಪ್ಯಾಕೇಜ್‌ಗೆ ಮೂರು ಸಾವಿರ ರೂಪಾಯಿ ಬೆಲೆ ಇದೆ ಎನ್ನಲಾಗಿದೆ.

ಹುಚ್ಚು ನಾಯಿ ಕಚ್ಚಿದ್ದರೆ ಇಮ್ಯುನೊ ಗ್ಲೋಬುಲಿನ್ ಚಿಕಿತ್ಸೆ ನೀಡಲಾಗುತ್ತದೆ. ಇದರ ಒಂದು ಡೋಸ್‌ಗೆ 1780 ರೂಪಾಯಿ ಆರಂಭಿಕ ಬೆಲೆ ಇದೆ. ಕಡಿತದ ಪ್ರಮಾಣಕ್ಕೆ ತಕ್ಕಂತೆ ಚಿಕಿತ್ಸೆಯ ಖರ್ಚು ಬರುತ್ತದೆ. ಮಾತ್ರವಲ್ಲ ಕೆಲವರಿಗೆ ಚಿಕಿತ್ಸೆಯ ದುಷ್ಪರಿಣಾಮ ಕೂಡಾ ಆಗಿದ್ದಿದೆ ಎಂದು ವರದಿ ತಿಳಿಸಿದೆ.

ಕೃಪೆ : madhyamam.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News