×
Ad

ಎಬಿವಿಪಿ ಜೆಎನ್‌ಯು ಉಪಾಧ್ಯಕ್ಷ ರಾಜೀನಾಮೆ

Update: 2016-08-27 12:44 IST

ಹೊಸದಿಲ್ಲಿ, ಆ.27: ದಲಿತರ ಮೇಲಿನ ದೌರ್ಜನ್ಯದ ಕುರಿತು ಎಬಿವಿಪಿಯ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ ಪರಿಷದ್‌ನ ಜೆಎನ್‌ಯು ಘಟಕದ ಉಪಾಧ್ಯಕ್ಷ ಜತಿನ್ ಗೊರಯಾ ರಾಜೀನಾಮೆ ನೀಡಿದ್ದಾರೆ. ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ವರ್ಷ ರಾಜೀನಾಮೆ ನೀಡಿದ ನಾಲ್ಕನೆ ಎಬಿವಿಪಿ ಸದಸ್ಯರಾಗಿದ್ದಾರೆ ಜತಿನ್.

ಫೆಬ್ರವರಿಯಲ್ಲಿ ಎಬಿವಿಪಿಯ ಜೆಎನ್‌ಯು ವಿಭಾಗದ ಜಂಟಿ ಕಾರ್ಯದರ್ಶಿ ಪ್ರದೀಪ್ ನರ್ವಾಲ್ ಹಾಗೂ ಇತರ ಇಬ್ಬರು ಅದೇ ತಿಂಗಳು ವಿಶ್ವವಿದ್ಯಾನಿಲಯದಲ್ಲಿ ‘ದೇಶ-ವಿರೋಧಿ’ ಘೋಷಣೆಗಳನ್ನು ಮೊಳಗಿಸಲಾಗಿದೆಯೆಂಬ ವಿಚಾರದಲ್ಲುಂಟಾದ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಶ್ವವಿದ್ಯಾನಿಲಯ ಆವರಣದಲ್ಲಿ ಪ್ರತಿಭಟನೆಯೊಂದರ ಸಂದರ್ಭ ಮನುಸ್ಮತಿಯ ಪುಟಗಳನ್ನೂ ಇದೀಗ ರಾಜೀನಾಮೆ ನೀಡಿರುವ ಜತಿನ್‌ಸುಟ್ಟಿದ್ದರು.‘‘ನಾನು ಈ ಜಾತಿವಾದಿ ಸಂಘಟನೆಯಿಂದ ಸಂಬಂಧ ಕಳಚುತ್ತೇನೆ. ಎಬಿವಿಪಿಯ ನಿಲುವು ಅದರ ಸಂಕುಚಿತ ಹಾಗೂ ಫ್ಯಾಸಿಸ್ಟ್ ಮನೋಭಾವನೆಯನ್ನು ಸೂಚಿಸುತ್ತದೆ’’ಎಂದು ಜತಿನ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

‘‘ಅವರು ರೋಹಿತ್ ವೇಮುಲಾ ಪ್ರಕರಣದಿಂದ ಹಿಡಿದು ಉನಾ ಘಟನೆಯ ತನಕ ಎಲ್ಲಾ ವಿಚಾರದಲ್ಲಿಯೂ ಪುರೋಗಾಮಿ ನಿಲುವು ತಳೆದಿದ್ದಾರಲ್ಲದೆ ನಮ್ಮ ಸಂಸ್ಥೆಗೆ ಕಳಂಕ ತರುವ ಕೆಲಸವನ್ನು ಎಬಿವಿಪಿ ಮಾಡುತ್ತಿದೆ’’ಎಂದೂ ಅವರು ತಿಳಿಸಿದ್ದಾರೆ. ‘‘ರೋಹಿತ್ ವೇಮುಲಾ ಅವರ ಸಾಂಘಿಕ ಹತ್ಯೆಯನ್ನು ಅವರು ಆತ್ಮಹತ್ಯೆಯೆಂದು ಬಿಂಬಿಸುತ್ತಿರುವುದು ಹಾಗೂ ಅದರಲ್ಲಿ ಶಾಮೀಲಾಗಿರುವವರನ್ನು ರಕ್ಷಿಸಲು ಯತ್ನಿಸುತ್ತಿರುವುದು ಅವರು ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ಬದ್ಧರಲ್ಲವೆಂಬುದನ್ನು ತೋರಿಸುತ್ತದೆ’’ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

‘‘ಗೋ ರಕ್ಷಣೆ ಹೆಸರಿನಲ್ಲಿ ದಲಿತರು ಹಾಗೂ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತದೆ, ಫ್ಯಾಸಿಸ್ಟ್ ಶಕ್ತಿಗಳು ಗೋ ರಕ್ಷಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿವೆ’ಎಂದು ಅವರು ಆಪಾದಿಸಿದ್ದಾರೆ.

ತಮಗೆ ಮುಂದೆ ಯಾವುದೇ ರಾಜಕೀಯ ಪಕ್ಷ ಸೇರುವ ಇಚ್ಛೆಯಿಲ್ಲವೆಂದೂ ಜತಿನ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News