ಜೆಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಸೇರಿದಂತೆ ಮೂವರಿಗೆ ವಿಧಿಬದ್ಧ ಜಾಮೀನು
ಹೊಸದಿಲ್ಲಿ, ಆ.27: ಜವಾಹರ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ , ಉಮರ್ ಖಾಲೀದ್ ಹಾಗು ಅನಿರ್ಬಾನ್ ಭಟ್ಟಾಚಾರ್ಯ ಅವರಿಗೆ ದಿಲ್ಲಿ ನ್ಯಾಯಾಲಯ ವಿಧಿಬದ್ಧವಾದ (ರೆಗ್ಯುಲರ್) ಜಾಮೀನು ನೀಡಿದೆ.
ಈ ಹಿಂದೆ ನ್ಯಾಯಾಲಯ ಕನ್ಹಯ್ಯ ಕುಮಾರ್ , ಉಮರ್ ಖಾಲೀದ್ ಹಾಗು ಅನಿರ್ಬಾನ್ ಭಟ್ಟಾಚಾರ್ಯ ಅವರಿಗೆ ಪ್ರಕರಣದಲ್ಲಿ ಮಧ್ಯಾಂತರ ಜಾಮೀನು ನೀಡಿತ್ತು. ಈ ಅವಧಿಯಲ್ಲಿ ಪೊಲೀಸರಿಗೆ ತನಿಖೆಯ ಸಂದರ್ಭದಲ್ಲಿ ಹಾಜರಾಗಿ ಸಂಪೂರ್ಣ ಸಹಕಾರ ನೀಡಿದ್ದಾರೆ.ಮಧ್ಯಾಂತರ ಜಾಮೀನನ್ನು ದುರ್ಬಲಕೆ ಮಾಡಿಲ್ಲ. ನ್ಯಾಯಾಲಯದ ಆದೇಶವನ್ನು ಸರಿಯಾಗಿ ಪಾಲಿಸಿರುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಾಲಯವು ಮಂದುವರಿಸಿದೆ.
ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ವರದಿಯ ಆಧಾರದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ.
" ಕನ್ಹಯ್ಯ ಕುಮಾರ್ , ಉಮರ್ ಖಾಲೀದ್ ಹಾಗು ಅನಿರ್ಬಾನ್ ಭಟ್ಟಾಚಾರ್ಯ ಪೊಲೀಸರಿಗೆ ತನಿಖೆಗೆ ಕರೆದಾಗಲೆಲ್ಲಾ ಹಾಜರಾಗಿ, ತನಿಖೆಗೆ ಪೂರ್ಣ ಸಹಕಾರ ನೀಡಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ಹಿಂದೆ ನೀಡಲಾಗಿದ್ದ ಷರತ್ತುಗಳಂತೆ ವಿಧಿಬದ್ಧ ಜಾಮೀನು ನೀಡುತ್ತಿದ್ದೇನೆ” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರೀತೇಶ್ ಸಿಂಗ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
"ಆರೋಪಿಗಳು ಮಧ್ಯಾಂತರ ಜಾಮೀನು ಪಡೆಯುವಾಗಲೇ ಬಾಂಡ್ ನೀಡಿದ್ದಾರೆ. ಮುಂದಿನ ಆದೇಶದವೆರೆಗೂ ಅದೇ ಬಾಂಡ್ ಊರ್ಜಿತವಾಗಿರುತ್ತದೆ" ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.
ಕನ್ಹಯ್ಯ ಕುಮಾರ್ ಸೇರಿದಂತೆ ಮೂವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಕಾಲಾವಧಿ ಸೆ.1ರಂದು ಕೊನೆಗೊಳ್ಳಲಿದ್ದು , ಮಾರ್ಚ್ 2ರಂದು ಇವರಿಗೆ ಮಧ್ಯಾಂತರ ಜಾಮೀನು ನೀಡಲಾಗಿತ್ತು. ಕನ್ಹಯ್ಯ ಅವರು ರೆಗ್ಯುಲರ್ ಬೈಲ್ ಗಾಗಿ ಆಗಸ್ಟ್ 17ರಂದು ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿ, ಈ ಉದ್ದೇಶಕ್ಕಾಗಿ ದಿಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡುವಂತೆ ಹೈಕೋರ್ಟ್ ಸಲಹೆ ನೀಡಿತ್ತು.