'ದರ ಏರಿಕೆ' ಮಾಡದೆಯೇ ಭಾರತೀಯ ರೈಲ್ವೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ್ದು ಹೀಗೆ..

Update: 2016-08-27 08:46 GMT

ಹೊಸದಿಲ್ಲಿ, ಆ.27: ಭಾರತೀಯ ರೈಲ್ವೆಯು ದರ ಏರಿಕೆ ಮಾಡದೆಯೇ ಉಪಾಯವಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಹೇಗಂತೀರಾ ? ಹಬ್ಬದ ಕಾಲದಲ್ಲಿ ಸಂಚರಿಸುವ ವಿಶೇಷ ರೈಲುಗಳಿಗೆ ವಿಶೇಷ ದರಗಳನ್ನು ನಿಗದಿಪಡಿಸಿ ಈ ಮೂಲಕ ತನ್ನ ಕಾರ್ಯವನ್ನು ರೈಲ್ವೆ ಸಾಧಿಸಿದೆ.

ಈ ವಿಶೇಷ ದರಗಳು ಸಾಮಾನ್ಯ ದರಗಳಿಗಿಂತ ಯಾವತ್ತೂ ಅಧಿಕವಾಗಿದ್ದು, ರೈಲ್ವೇ ಅದನ್ನು ದರ ಏರಿಕೆಯೆನ್ನದೆ ‘ವಿಶೇಷ ದರ’ ಎನ್ನುತ್ತಿದೆ. ಈ ವಿಶೇಷ ರೈಲುಗಳ ವಿಶೇಷ ದರಕ್ಕೆ ಇಲ್ಲಿದೆ ಒಂದು ನಿದರ್ಶನ. ಪ್ರಸಕ್ತ ಗಣೇಶ ಚತುರ್ಥಿ ಸಂಬಂಧ ಕೊಂಕಣ ರೈಲ್ವೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲಕರ ವಾಗಲೆಂದು 226 ರೈಲು ಸೇವೆಗಳನ್ನು ಒದಗಿಸುತ್ತಿದೆ. ಈ ಹದಿನೈದು ದಿನಗಳಲ್ಲಿ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಮುಂಬೈನಿಂದ ತಮ್ಮ ಹಳ್ಳಿಗಳಿಗೆ ಪ್ರಯಾಣಿಸುವುದರಿಂದ ಸಹಜವಾಗಿಯೇ ವಿಶೇಷ ದರಗಳಿಂದ ರೈಲ್ವೆಗೆ ವಿಶೇಷ ಲಾಭವಿದೆ.

ಪಶ್ಚಿಮ ರೈಲ್ವೆ ಈ ವರ್ಷದ ಎಪ್ರಿಲ್ ಹಾಗೂ ಜುಲೈ ನಡುವೆ 659 ವಿಶೇಷ ರೈಲು ಸೇವೆಗಳನ್ನು ಒದಗಿಸಿದ್ದರೆ. ಸೆಂಟ್ರಲ್ ರೈಲ್ವೆ 494 ವಿಶೇಷ ರೈಲುಗಳನ್ನು ಇದೇ ಅವಧಿಯಲ್ಲಿ ಒದಗಿಸಿದೆ.

ರೈಲ್ವೇ ಅಧಿಕಾರಿಗಳ ಪ್ರಕಾರ ಭಾರತೀಯ ರೈಲ್ವೆ ಜಾಲದಲ್ಲಿ ಪ್ರತಿ ವರ್ಷ ಸುಮಾರು 35,000 ಕ್ಕೂ ಹೆಚ್ಚು ವಿಶೇಷ ರೈಲುಗಳು ಸಂಚರಿಸುತ್ತವೆ. ಸುವಿಧಾ ಪರಿಕಲ್ಪನೆಯಡಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುವುದು ಎಂದು ಹೇಳಲಾಗುತ್ತಿದೆ. ಜುಲೈ 2015ರಲ್ಲಿ ಜಾರಿಯಾದ ಈ ಸುವಿಧಾ ಯೋಜನೆಯನ್ವಯ ಟಿಕೆಟ್‌ಗಳು ಐದು ಟಿಕೆಟ್‌ಗಳಂತೆ ಲಾಟ್‌ನಲ್ಲಿ ಮಾರಾಟವಾಗುತ್ತಿದ್ದು ಈ ಟಿಕೆಟ್‌ಗಳ ಮೂಲ ದರ ತತ್ಕಾಲ್ ದರಕ್ಕೆ ಸಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News