ಅಂಗಡಿಬಾಗಿಲಲ್ಲಿ ಮಲಗುವ ಈ ದೀದಿ ಲಕ್ಷಾಧಿಪತಿ !
ವಾಡಾನಪಳ್ಳಿ,ಆಗಸ್ಟ್ 27: ಅಂಗಡಿಬಾಗಲಲ್ಲಿ ರಾತ್ರಿ ಬೆಳಗು ಮಾಡುವ ಭಿಕ್ಷುಕಿ ಮಹಿಳೆಯೊಬ್ಬರ ಬಳಿಯಿದ್ದ ಗೋಣಿಚೀಲದಲ್ಲಿ ಒಂದುಲಕ್ಷರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ಎಲ್ಲರೂ ದೀದಿ ಎಂದು ಕರೆಯುವ ಈ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಕೋರ್ಟಿಗೆ ಹಾಜರುಪಡಿಸಿದ ಬಳಿಕ ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಈ ಮಹಿಳೆ ವಾಡನಾಪಳ್ಳಿ ಜಂಕ್ಷನ್‌ನಲ್ಲಿ ಕಳೆದ 25ವರ್ಷಗಳಿಂದ ಬೀದಿಬದಿ ವಾಸಿಸುತ್ತಿದ್ದಾರೆ. ಬೀದಿಬದಿಯಲ್ಲಿಯೇ ಆಹಾರ ತಯಾರಿಸಿ ಉಣ್ಣುತ್ತಿದ್ದರು. ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಮಹಿಳೆಯ ವಶದಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಗೋಣಿಯಲ್ಲಿ ಸುರಕ್ಷಿತವಾಗಿ ತೆಗೆದಿರಿಸಿದ್ದ ಹಣ ಪತ್ತೆಯಾಗಿದೆ.ಇಪ್ಪತ್ತೈದು ಪೈಸೆಯಿಂದ ಹಿಡಿದು ನೂರು ರೂಪಾಯಿ ನಾಣ್ಯವೂ ಇವೆ. ಕರೆನ್ಸಿಗಳು ಹಾಗೂ ದಿರ್ಹಮ್‌ಕೂಡಾ ಇದ್ದವು.
ನೂರು ರೂಪಾಯಿಯ 167 ನೋಟುಗಳು, ಐವತ್ತು ರೂಪಾಯಿಯ 81 ನೋಟುಗಳು,ಇಪ್ಪತ್ತರ 600 ನೋಟುಗಳು, ಹತ್ತುರೂಪಾಯಿಯ 5609 ನೋಟುಗಳು ಐದುರೂಪಾಯಿಯ 154 ನೋಟುಗಳು ಹತ್ತುರೂಪಾಯಿಯ 14 ನಾಣ್ಯಗಳು, ಐದುರೂಪಾಯಿಯ2612ನಾಣ್ಯಗಳು, ಎರಡು ರೂಪಾಯಿಯ 1542 ನಾಣ್ಯಗಳು,ಒಂದುರೂಪಾಯಿಯ 1976 ನಾಣ್ಯಗಳು, 50ಪೈಸೆಯ 426 ನಾಣ್ಯಗಳು, ಹಳೆಯ ಮತ್ತು ಹರಿದ ನೋಟುಗಳ ಸಹಿತ ಒಂದು ಲಕ್ಷದ ಹನ್ನೊಂದು ಸಾವಿರದ ಏಳುನೂರ ಮೂವತ್ತ ಮೂರು ರೂಪಾಯಿ(1,11,733) ಇದ್ದವು ಎಂದು ಪಂಚಾಯತ್ ಅಧ್ಯಕ್ಷ ಶಿಜಿತ್ ವಡಕುಂಚೇರಿ ಹೇಳಿದ್ದಾರೆಂದು ವರದಿಯಾಗಿದೆ.
ಹಣವನ್ನು ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರು, ಊರವರ ಸಮಕ್ಷಮ ಎಣಿಸಿದ ಬಳಿಕ ಪೊಲೀಸರು ಮತ್ತು ಪಂಚಾಯತ್‌ನ ಜವಾಬ್ದಾರಿಯಲ್ಲಿ ಬ್ಯಾಂಕಿನಲ್ಲಿರಿಸಲಾಗಿದೆ. ಕೆಲವು ದಿವಸಗಳಿಂದ ಅಲೆದಾಡುತ್ತಿದ್ದ ಪ್ರಮೀಳಾ ಎಂಬ ಇನ್ನೊಬ್ಬಳು ಯುವತಿಯನ್ನು ಕೂಡಾ ದೀದಿ ಎಂದು ಕರೆಯುವು ಭಿಕ್ಷುಕಿ ಜೊತೆಗೆ ಸಾಮಾಜಿಕ ಕಾರ್ಯಕರ್ತರು, ಪೊಲೀಸರು ಹಾಗೂ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಚಿಕಿತ್ಸೆ ಕೊಡಿಸಲು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.