ಶಾಸನಗಳ ಸಂರಕ್ಷಣೆಗೆ ತುರ್ತು ಕ್ರಮ ಅಗತ್ಯ:ಡಾ.ಜಗದೀಶ ಶೆಟ್ಟಿ

Update: 2016-08-27 13:24 GMT

ಉಡುಪಿ, ಆ.27: ಇತಿಹಾಸದ ಸರಿಯಾದ ಅಧ್ಯಯನಕ್ಕೆ ಆಕರಗಳಾದ ಶಾಸನಗಳ -ಶಿಲಾ ಶಾಸನ ಹಾಗೂ ತಾಮ್ರ ಶಾಸನ- ಸಂರಕ್ಷಣೆಗೆ ತುರ್ತು ಕ್ರಮಗಳ ಅಗತ್ಯವಿದೆ ಎಂದು ಜಿಲ್ಲೆಯ ಖ್ಯಾತ ಇತಿಹಾಸಜ್ಞ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕರ ವೇದಿಕೆ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಶುಕ್ರವಾರ ಹಮ್ಮಿಕೊಂಡ ಇತಿಹಾಸ ಪುನಶ್ಚೇತನ ಕಾರ್ಯಾಗಾರದಲ್ಲಿ ‘ಶಾಸನಶಾಸ್ತ್ರದ ಮಹತ್ವ ಹಾಗೂ ತುಳುನಾಡಿನ ಶಾಸನಗಳು’ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡುತಿದ್ದರು.

ಶಾಸನಗಳಿಂದ ಅಂದಿನ ಕಾಲದ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳ ಕುರಿತು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯ ವಾಗುತ್ತದೆ. ಶಾಸನಗಳು ಅವುಗಳ ಮಾಹಿತಿಗಳನ್ನು ನೀಡುವುದರಿಂದ ಇತಿಹಾಸದ ರಚನೆಯಲ್ಲಿ ಇವು ಪ್ರಮುಖ ಆಕರಗಳಾಗಿರುತ್ತವೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಇಂಥ ಸಾವಿರಾರು ಶಾಸನಗಳಿವೆ. ತುಳುನಾಡಿನ ಶಾಸನಗಳು ಇಂದು ಬೇರೆ ಬೇರೆ ಕಾರಣಗಳಿಂದ ಹಾಳಾಗುತ್ತಿವೆ; ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಇವುಗಳ ಸಂರಕ್ಷಣೆ ತುರ್ತು ಅಗತ್ಯವಾಗಿದೆ. ಇದು ಬರೀ ಸರಕಾರದ ಜವಾಬ್ದಾರಿ ಮಾತ್ರವಲ್ಲ, ಜನರ ಜವಾಬ್ದಾರಿ ಸಹ. ಜನರಲ್ಲೂ ಈ ಬಗ್ಗೆ ಕಾಳಜಿ ಮೂಡಬೇಕು. ಕಾಲೇಜು ವಿದ್ಯಾರ್ಥಿಗಳನ್ನೂ ಶಾಸನಗಳ ಸಂರಕ್ಷಣೆಯಲ್ಲಿ ಬಳಸಿಕೊಳ್ಳಬೇಕು ಎಂದು ಡಾ.ಶೆಟ್ಟಿ ನುಡಿದರು.

ತುಳುನಾಡಿನ ಶಾಸನಗಳ ಆರಂಭಿಕ ಸಮಗ್ರ ಅಧ್ಯಯನ ನಡೆಸಿದವರು ಇತಿಹಾಸಜ್ಞರಾದ ಡಾ.ಪಿ.ಗುರುರಾಜ ಭಟ್ ಹಾಗೂ ಡಾ.ಕೆ.ವಿ.ರಮೇಶ್ ಅವರು. ಅನಂತರ ತುಳುನಾಡಿನ ಶಾಸನಗಳ ಅಧ್ಯಯನ ಕಾರ್ಯವನ್ನು ಡಾ.ಬಿ.ವಸಂತ ಶೆಟ್ಟಿ, ಡಾ.ಕೆ.ಜಿ.ವಸಂತ ಮಾಧವ, ಪ್ರೊ.ಪಿ.ವಿ.ನರಸಿಂಹ ಮೂರ್ತಿ ಮುಂದುವರಿಸಿದರು ಎಂದರು.

ಬಾರಕೂರು ರಾಜಧಾನಿ

ಕಾಸರಗೋಡಿನಿಂದ ಭಟ್ಕಳದವರೆಗಿನ ತುಳುನಾಡಿನ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಶಾಸನಗಳು, ಸ್ಮಾರಕಗಳು ಇರುವುದು ತುಳುನಾಡಿನ ರಾಜಧಾನಿ ಎನಿಸಿದ ಬಾರಕೂರಿನಲ್ಲಿ. ಈ ಭಾಗವನ್ನು ಸುಮಾರು ಒಂದು ಸಾವಿರ ವರ್ಷಗಳ ಕಾಲ ಆಳಿದ ಅಳುಪರ ರಾಜಧಾನಿ ಬಾರಕೂರಾಗಿತ್ತು. ಅನಂತರ ವಿಜಯನಗರ ಅರಸರ ಕಾಲದಲ್ಲಿ ಅದು ಪ್ರಾಂತೀಯ ರಾಜಧಾನಿಯಾಗಿತ್ತು ಎಂದರು.

ವಡ್ಡರ್ಸೆ ಶಾಸನ

ಜಿಲ್ಲೆಯಲ್ಲಿ ಅತೀ ಪ್ರಾಚೀನ ಶಾಸನ ಪತ್ತೆಯಾಗಿರುವುದು ಆಳುಪರ ಕಾಲದ್ದು. ವಡ್ಡರ್ಸೆಯಲ್ಲಿ ಪತ್ತೆಯಾಗಿರುವ 7ನೆ ಶತಮಾನದ ಈ ಶಾಸನದಲ್ಲಿ ಅಳುಪರ ಒಂದನೆ ಅಳುವರಸ ಅನ್ನದಾನಕ್ಕಾಗಿ ಭೂಮಿಯ ದಾನವನ್ನು ತಿಳಿಸುತ್ತದೆ. ಅದರಲ್ಲಿ ಉಲ್ಲೇಖಿಸಲಾಗಿರುವ ಬನ್ನ ಇಂದಿನ ಬನ್ನಾಡಿಯಾದರೆ, ವಡ್ಡರಸೆ ಇಂದಿನ ವಡ್ಡರ್ಸೆಯಾಗಿದೆ.

ಉಳಿದಂತೆ ಹೊಯ್ಸಳರ ಕಾಲದ ತುಳುನಾಡಿನ ಸುಮಾರು 10 ಶಾಸನಗಳು ಜಿಲ್ಲೆಯಲ್ಲಿ ಪತ್ತೆಯಾದರೆ, ವಿಜಯನಗರ ಕಾಲಕ್ಕೆ ಸಂಬಂಧಿಸಿದ ಸುಮಾರು 700 ಶಾಸನಗಳನ್ನು ಈವರೆಗೆ ಗುರುತಿಸಲಾಗಿದೆ. ಅಲ್ಲದೇ ಸ್ಥಳೀಯ ರಾಜಮನೆ ತನಗಳಾದ ಬಂಗರು, ಚೌಟರು, ಹೆಗ್ಗಡೆಯವರು, ತೋಳಹರು ಕಾಲದ ಸಾಕಷ್ಟು ಶಾಸನಗಳು ಪತ್ತೆಯಾಗಿವೆ. ಅತೀ ಹೆಚ್ಚಿನ ಶಾಸನಗಳು ಪತ್ತೆಯಾಗಿರುವುದು ಬಾರಕೂರಿನಲ್ಲಿ. ಅನಂತರ ಬಂದರು ನಗರವಾದ ಬಸರೂರು, ಉದ್ಯಾವರ ಹಾಗೂ ಮೂಡಬಿದರೆಗಳಲ್ಲಿ. ಇದಲ್ಲದೇ ಬ್ರಹ್ಮಾವರ, ಬೆಳ್ಮಣ್‌ಗಳಲ್ಲೂ ಶಾಸನಗಳು ಸಿಕ್ಕಿವೆ ಎಂದು ಡಾ.ಶೆಟ್ಟಿ ನುಡಿದರು.

ಉಡುಪಿ ಸುತ್ತಮುತ್ತಲು ಸುಮಾರು 30 ಶಾಸನಗಳು ಪತ್ತೆಯಾಗಿವೆ. ಇವುಗಳಲ್ಲಿ 13ಶಾಸನಗಳು ಶ್ರೀಕೃಷ್ಣ ಮಠ/ದೇವಸ್ಥಾನಕ್ಕೆ ಸಂಬಂಧಿಸಿದ್ದು, ಈ ಶಾಸನಗಳು ಅಂದಿನ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವಂತಿವೆ. ಬಸರೂರು ಅಂದಿನ ಪ್ರಮುಖ ವ್ಯಾಪಾರಿ ಕೇಂದ್ರ ವಾಗಿದ್ದು ಅಲ್ಲಿ 13ಶಾಸನಗಳು ದೊರಕಿವೆ. ಕೊಟೇಶ್ವರ ಹಾಗೂ ಹಟ್ಟಿಯಂಗಡಿಗಳೂ ಅಂದಿನ ಪ್ರಮುಖ ನಗರವಾಗಿರುವುದು ಶಾಸನಗಳಿಂದ ತಿಳಿಯುತ್ತದೆ ಎಂದರು.

ಉದ್ಯಾವರದಲ್ಲಿ ಸಿಕ್ಕಿರುವ ಎಂಟನೆ ಶತಮಾನದ ಇಮ್ಮಡಿ ಅಳುವರಸನ ಶಾಸನ ಬಹುಮುಖ್ಯವಾಗಿದ್ದು, ಇದರಲ್ಲಿ ಘಟ್ಟದ ಮೇಲಿನವರೊಂದಿಗೆ ಸಂಬಂಧವನ್ನು ಅರಿಯಬಹುದಾಗಿದೆ. ಬಾರಕೂರಿನ 1139ರ ಶಾಸನದಲ್ಲಿ ಸೂರಾಲ್‌ನ ತೋಳಾಹರ ಮನೆತನದ ಉಲ್ಲೇಖವಿದೆ. 1155ರ ಬಾರಕೂರಿನ ಕೋಟೆಕೇರಿಯ ಶಾಸನದಲ್ಲಿ ಬಾರಕೂರು ಮತ್ತು ಕಾಶ್ಮೀರ ಸಂಬಂಧದ ಉಲ್ಲೇಖವಿದ್ದು, ಕಾಶ್ಮೀರದ ಶಾಣರಾಜ ನೀಡಿದ ದಾನವನ್ನು ತಿಳಿಸಲಾಗಿದೆ ಎಂದವರು ವಿವರಿಸಿದರು.

ಕನ್ನಡದ ಪ್ರಾಚೀನ ತಾಮ್ರಶಾಸನ

ಕನ್ನಡದ ಅತ್ಯಂತ ಪ್ರಾಚೀನ ತಾಮ್ರ ಶಾಸನ ಪತ್ತೆಯಾಗಿರುವುದು ಶಿರ್ವ ಸಮೀಪದ ಬೆಳ್ಮಣ್‌ನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ. ಒಂದನೇ ಬಂಕಿದೇವನ ಕಾಲದ ಈ ಶಾಸನದಲ್ಲಿ ಚೋಳರನ್ನು ಯುದ್ಧದಲ್ಲಿ ಸೋಲಿಸಿದ ಉಲ್ಲೇಖವಿದೆ ಎಂದು ಡಾ.ಜಗದೀಶ ಶೆಟ್ಟಿ ನುಡಿದರು.
ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿ ಆಗ ರಾಣಿಯರು ಅಧಿಕಾರ ನಿರ್ವಹಿಸುತಿದ್ದ ಉಲ್ಲೇಖವಿದ್ದರೆ, ಕುಮ್ರಗೋಡು ಶಾಸನದಲ್ಲಿ ಕಂಬಳ ನಡೆಯುತಿದ್ದ ಉಲ್ಲೇಖಗಳಿವೆ. ಕೃಷ್ಣದೇವರಾಯನ ಕಾಲದ ಹಲವು ಶಾಸನಗಳು ಸಿಕ್ಕಿವೆ. ಅಂದು ಭೂ ಅಡವು ಪದ್ಧತಿ ಜಾರಿಯಲ್ಲಿರುವುದು ತಿಳಿಯುತ್ತದೆ ಎಂದರು.

ಅತ್ಯಾಚಾರಿ ರಾಜ್ಯಪಾಲನಿಗೆ ದಂಡ!

1405ರ ಬಾರಕೂರು ಶಾಸನದಲ್ಲಿ ವಿಜಯನಗರ ಅರಸರ ಪ್ರತಿನಿಧಿಯಾಗಿದ್ದ ರಾಜ್ಯಪಾಲನೊಬ್ಬ ಹೆಣ್ಮಗಳ ಮೇಲೆ ಅತ್ಯಾಚಾರ ಮಾಡಿದ ತಪ್ಪಿಗೆ ವಿಚಾರಣೆ ಯ ನಂತರ ಜನ್ನಾಡಿಯಲ್ಲಿ ಭೂಪರಿಹಾರ ನೀಡಿದ ಉಲ್ಲೇಖವಿದೆ ಎಂದು ಡಾ.ಜಗದೀಶ ಶೆಟ್ಟಿ ನುಡಿದರು.

ಹಾಸುಗಲ್ಲಾಗಿ ಶಾಸನ

ಬಾರಕೂರಿನಲ್ಲಿ ಇಂದು ಪಂಚಲಿಂಗೇಶ್ವರ ದೇವಸ್ಥಾನದ ಶಾಸನಗಳು ಹಾಸುಗಲ್ಲುಗಳಾಗಿವೆ. ಕೆರೆಗೆ ಇವುಗಳನ್ನು ಬಳಸಲಾಗಿದೆ. ಬಟ್ಟೆ ಒಗೆಯುವ ಕಲ್ಲುಗಳಾಗಿ, ಕಾಲುಸಂಕವಾಗಿ ಹಾಗೂ ನಳ್ಳಿ ನೀರ ಕೆಳಗೆ ಚಪ್ಪಡಿ ಕಲ್ಲಾಗಿ ಬಳಸಲಾಗಿದೆ. ಶಾಸನಗಳನ್ನು ಸಂರಕ್ಷಿಸದೆ ನಿರ್ಲಕ್ಷಿಸಿದರೆ ಅಮೂಲ್ಯ ಇತಿಹಾಸದ ಆಕರವನ್ನು ಕಳೆದುಕೊಂಡಂತೆ.

-ಬಿ.ಜಗದೀಶ ಶೆಟ್ಟಿ, ಇತಿಹಾಸಜ್ಞ ಪೂರ್ಣಪ್ರಜ್ಞ ಕಾಲೇಜು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News