ಸೋನಿಯಾ-ರಾಹುಲ್‌ಗೆ ನೋಟಿಸ್
Update: 2016-08-27 23:14 IST
ಹೊಸದಿಲ್ಲಿ, ಆ.27: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗಳಿಂದ(ಎಜೆಎಲ್) ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಈ ಹೊಸ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರರಿಗೆ ದಿಲ್ಲಿಯ ನ್ಯಾಯಾಲಯವೊಂದು ನೋಟಿಸ್ ನೀಡಿದೆ.
ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ ಹಾಗೂ ಸ್ಯಾಮ್ ಪಿತ್ರೋಡಾರಿಗೂ ಮೆಟ್ರೊ ಪಾಲಿಟನ್ ಮ್ಯಾಜಿಸ್ಟ್ರೇಟ್ ಲವ್ಲೀನ್ ನೋಟಿಸ್ ಜಾರಿ ಮಾಡಿದ್ದು, 2 ವಾರಗಳೊಳಗೆ ಉತ್ತರಿಸುವಂತೆ ಆದೇಶಿಸಿ ಪ್ರಕರಣವನ್ನು ಅ.4ಕ್ಕೆ ಮುಂದೂಡಿದ್ದಾರೆ.
ತನ್ನ ಮನವಿಯಲ್ಲಿ ಸ್ವಾಮಿ, ನ್ಯಾಶನಲ್ ಹೆರಾಲ್ಡ್‌ನ ಪಾಲುದಾರ ಎಜೆಎಲ್‌ಗೆ ಕಾಂಗ್ರೆಸ್ ನೀಡಿರುವ ಸಾಲದ ಕುರಿತು ದಾಖಲೆಗಳನ್ನು ಕೇಳಿದ್ದು, ಅವು ಪ್ರಕರಣದ ವಿಚಾರಣೆಗೆ ಅಗತ್ಯವಾಗಿವೆ ಎಂದಿದ್ದಾರೆ.