×
Ad

ಅಗಾಧ ಪ್ರಮಾಣದಲ್ಲಿ ಪಾಕ್ ಪಡೆಗಳಿಂದ ಮಾನವಹಕ್ಕು ಉಲ್ಲಂಘನೆ

Update: 2016-08-28 00:02 IST

ವಾಶಿಂಗ್ಟನ್, ಆ. 27: ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ‘‘ಸುನಾಮಿಯಂಥ ಪ್ರಮಾಣದಲ್ಲಿ’’ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿವೆ ಎಂದು ಉನ್ನತ ಬಲೂಚ್ ನಾಯಕ ಹಾಗೂ ಬಲೂಚ್ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ಬ್ರಹುಮ್‌ಡಗ್ ಬುಗ್ಟಿ ಶುಕ್ರವಾರ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಬಲೂಚ್ ರಾಷ್ಟ್ರೀಯ ಆಂದೋಲನದಲ್ಲಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ನೆರವನ್ನು ಅವರು ಕೋರಿದ್ದಾರೆ.ಬಲೂಚಿಸ್ತಾನದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

‘‘ಪಾಕಿಸ್ತಾನದ ಪಡೆಗಳು ಸುನಾಮಿಯಷ್ಟು ಪ್ರಮಾಣದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿವೆ. ನಾವು ಇನ್ನೊಂದು ಕ್ಷಣವೂ ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ’’ ಎಂದು ಸ್ವಿಝರ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಬುಗ್ಟಿ ಹೇಳಿದರು.ಬ್ರಹುಮ್‌ಡಗ್ ಬುಗ್ಟಿ ಬಲೂಚ್ ರಾಷ್ಟ್ರೀಯವಾದಿ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ಟಿಯ ಮೊಮ್ಮಗನಾಗಿದ್ದಾರೆ. ಅಕ್ಬರ್ ಖಾನ್ ಬುಗ್ಟಿ 10 ವರ್ಷಗಳ ಹಿಂದೆ ಪಾಕಿಸ್ತಾನಿ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

 ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ಬಲೂಚ್ ಜನರ ಜನಮತಗಣನೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.ಬಲೂಚ್ ಜನರ ಸ್ವಾತಂತ್ರ ಚಳವಳಿಯನ್ನು ಮುಂದುವರಿಸಲು ರಾಜಕೀಯ ಮತ್ತು ಸೇನಾ ನೆರವನ್ನು ನೀಡುವಂತೆ ಅಮೆರಿಕ, ನ್ಯಾಟೊ ದೇಶಗಳು, ಇಸ್ರೇಲ್ ಮತ್ತು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಅವರು ಒತ್ತಾಯಿಸಿದ್ದಾರೆ.ಪಾಕಿಸ್ತಾನ ಸರಕಾರದೊಂದಿಗೆ ಮಾತುಕತೆಗೆ ತಾನು ಸಿದ್ಧನಿದ್ದೇನೆ ಎಂದು ಘೋಷಿಸಿದ ಅವರು, ಆದರೆ, ಸ್ವಾತಂತ್ರ ಚಳವಳಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ವಿಝರ್‌ಲ್ಯಾಂಡ್‌ನಿಂದ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

ಪ್ರಾನ್ಸ್‌ನಷ್ಟು ವಿಶಾಲವಾಗಿರುವ ಬಲೂಚಿಸ್ತಾನ್ ಪಾಕಿಸ್ತಾನದ ಅತ್ಯಂತ ದೊಡ್ಡ ಪ್ರಾಂತ ಎಂದು ಹೇಳಿದ ಅವರು, ಅದು ಕಳೆದ ಏಳು ದಶಕಗಳಿಂದ ಪಾಕಿಸ್ತಾನದ ಅಕ್ರಮ ವಶದಲ್ಲಿದೆ ಎಂದರು.ಸ್ವಾತಂತ್ರ ದಿನದ ಭಾಷಣದಲ್ಲಿ ಇತ್ತೀಚೆಗೆ ಮೋದಿ ನೀಡಿದ ಹೇಳಿಕೆ ಏಳು ದಶಕಗಳಲ್ಲೇ ಅತ್ಯಂತ ಪ್ರಭಾವಯುತ ಹೇಳಿಕೆ ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News