ಕಾಶ್ಮೀರ ವಿಷಯ ಪ್ರಸ್ತಾಪಿಸಲು 22 ರಾಯಭಾರಿಗಳ ನೇಮಕ
Update: 2016-08-28 00:04 IST
ಇಸ್ಲಾಮಾಬಾದ್, ಆ. 27: ವಿವಿಧ ದೇಶಗಳಿಗೆ ಹೋಗಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವುದಕ್ಕಾಗಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಂದು 22 ಸಂಸದರನ್ನು ವಿಶೇಷ ರಾಯಭಾರಿಗಳನ್ನಾಗಿ ನೇಮಿಸಿದ್ದಾರೆ. ‘‘ಕಾಶ್ಮೀರಿ ಜನರಿಗೆ ಸ್ವನಿರ್ಣಯದ ಹಕ್ಕು ನೀಡುವ ತನ್ನ ದೀರ್ಘ ಕಾಲೀನ ಭರವಸೆಯ ಬಗ್ಗೆ ವಿಶ್ವಸಂಸ್ಥೆಯನ್ನು ನಾವು ನೆನಪಿಸುತ್ತೇವೆ’’ ಎಂದು ಶರೀಫ್ ಹೇಳಿದರು. ಪಾಕಿಸ್ತಾನದ ರಾಜತಾಂತ್ರಿಕ ದಾಳಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ, ಕಾಶ್ಮೀರ ವಿಷಯದ ಬಗ್ಗೆ ಗಮನ ಸೆಳೆಯಲು ಜಗತ್ತಿನ ವಿವಿಧ ಭಾಗಗಳಿಗೆ ಸಂಸದರನ್ನು ಕಳುಹಿಸಲು ತಾನು ನಿರ್ಧರಿಸಿರುವುದಾಗಿ ತಿಳಿಸಿದರು. ಜುಲೈ 8ರಂದು ಹಿಜ್ಬುಲ್ ಭಯೋತ್ಪಾದಕ ಬುಹಾನ್‌ರ್ ವಾನಿಯನ್ನು ಭದ್ರತಾ ಪಡೆಗಳುಕೊಂದಬಳಿಕ ಕಾಶ್ಮೀರ ಕಣಿವೆಯಲ್ಲಿ ಹೊತ್ತಿಕೊಂಡಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನಗಳ ಪ್ರಧಾನಿಗಳ ನಡುವೆ ನಡೆಯುತ್ತಿರುವ ಮಾತಿನ ಚಕಮಕಿಯ ಮುಂದುವರಿದ ಭಾಗ ಇದಾಗಿದೆ.