ಅಫ್ಘಾನ್: ಇನ್ನೊಂದು ಜಿಲ್ಲೆ ತಾಲಿಬಾನ್ ವಶಕ್ಕೆ
Update: 2016-08-28 00:08 IST
ಗರ್ಡೇಝ್ (ಅಫ್ಘಾನಿಸ್ತಾನ), ಆ. 27: ಪೂರ್ವ ಅಫ್ಘಾನಿಸ್ತಾನದ ಜಿಲ್ಲೆಯೊಂದನ್ನು ತಾಲಿಬಾನ್ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಬಂಡುಕೋರರು ಡಝನ್‌ಗಟ್ಟಳೆ ಪೊಲೀಸರು ಮತ್ತು ಸೈನಿಕರನ್ನು ಹತ್ಯೆಗೈದಿದ್ದು, ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ರಸ್ತೆ ಮಾರ್ಗಗಳ ಮೇಲೆ ನಿಯಂತ್ರಣ ಪಡೆದುಕೊಂಡಿದ್ದಾರೆ.
ರಾತ್ರಿಯಿಡೀ ನಡೆದ ಕಾಳಗದ ಬಳಿಕ ಭದ್ರತಾ ಪಡೆಗಳು ಪಕ್ಟಿಯ ಪ್ರಾಂತದ ಜನಿ ಖೇಲ್ ಜಿಲ್ಲೆಯಿಂದ ಹಿಮ್ಮೆಟ್ಟಿದವು ಎಂದು ಜಿಲ್ಲೆಯ ಗವರ್ನರ್ ಅಬ್ದುಲ್ ರಹ್ಮಾನ್ ಸೊಲಮಾಲ್ ತಿಳಿಸಿದರು. ಎಂಟು ಜಿಲ್ಲೆಗಳು ಸಂಧಿಸುವ ಕೇಂದ್ರ ಸ್ಥಳದಲ್ಲಿ ಈ ಜಿಲ್ಲೆಯಿದೆ ಹಾಗೂ ಅದು ಪಕ್ಟಿಯ ಪ್ರಾಂತವನ್ನು ನೆರೆಯ ಪ್ರಾಂತ ಖೋಸ್ಟ್ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕಿಸುತ್ತದೆ.