ಉತ್ತರ ಕೊರಿಯದ ಕ್ಷಿಪಣಿ ಪರೀಕ್ಷೆಗಳಿಗೆ ಭದ್ರತಾ ಮಂಡಳಿ ಖಂಡನೆ
ವಿಶ್ವಸಂಸ್ಥೆ, ಆ. 27: ಉತ್ತರ ಕೊರಿಯವು ಜುಲೈ ಮತ್ತು ಆಗಸ್ಟ್‌ಗಳಲ್ಲಿ ನಡೆಸಿರುವ ನಾಲ್ಕು ಪ್ರಕ್ಷೇಪಕ ಕ್ಷಿಪಣಿ ಉಡಾವಣೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಲವಾಗಿ ಖಂಡಿಸಿದೆ. ಇದು ಎಲ್ಲಾ ರೀತಿಯ ಪ್ರಕ್ಷೇಪಕ ಕ್ಷಿಪಣಿ ಚಟುವಟಿಕೆಗಳ ಮೇಲೆ ವಿಧಿಸಲಾಗಿರುವ ನಿಷೇಧದ ಗಂಭೀರ ಉಲ್ಲಂಘನೆಯಾಗಿದೆ ಎಂದು ಅದು ಬಣ್ಣಿಸಿದೆ.
ಶುಕ್ರವಾರ ರಾತ್ರಿ ಎಲ್ಲ 15 ಸದಸ್ಯರು ಸಹಿ ಹಾಕಿರುವ ಹೇಳಿಕೆಯು, ಉತ್ತರ ಕೊರಿಯದ ಪ್ರಕ್ಷೇಪಕ ಕ್ಷಿಪಣಿ ಚಟುವಟಿಕೆಗಳು ಅದರ ಪರಮಾಣು ಅಸ್ತ್ರ ಸಾಗಾಟ ವ್ಯವಸ್ಥೆಯ ಅಭಿವೃದ್ಧಿಗೆ ಕಾರಣವಾಗುತ್ತದೆ ಹಾಗೂ ಅದು ಉದ್ವಿಗ್ನತೆಗಳನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಎಪ್ರಿಲ್ ಮತ್ತು ಜೂನ್ ತಿಂಗಳುಗಳ ನಡುವಿನ ಅವಧಿಯಲ್ಲಿ ಆರು ಕ್ಷಿಪಣಿ ಹಾರಾಟಗಳನ್ನು ನಡೆಸಿದ ಬಳಿಕ ಉತ್ತರ ಕೊರಿಯ ಮತ್ತೆ ಕ್ಷಿಪಣಿ ಹಾರಾಟ ನಡೆಸಿರುವುದು, ಇಂಥ ಉಡಾವಣೆಗಳು ಹಾಗೂ ಪರಮಾಣು ಪರೀಕ್ಷೆಗಳನ್ನು ನಿಲ್ಲಿಸುವುದಾಗಿ ಅದು ಪದೇ ಪದೇ ನೀಡಿರುವ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ ಹಾಗೂ ಇದು ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ ಎಂದು ಮಂಡಳಿ ಹೇಳಿದೆ. ಪ್ಯಾಂಗ್‌ಯಾಂಗ್ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ಜಾರಿಗೊಳಿಸುವ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸುವಂತೆ ಹೇಳಿಕೆಯು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ.