ಟ್ರಂಪ್ ಆರೋಗ್ಯ ವರದಿಯನ್ನು ಅವಸರದಿಂದ ಬರೆದೆ: ವೈದ್ಯ
ವಾಶಿಂಗ್ಟನ್, ಆ. 27: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಚೇತೋಹಾರಿ ಆರೋಗ್ಯ ವರದಿಯನ್ನು ನೀಡಿರುವ ಅವರ ಆಪ್ತ ವೈದ್ಯರು, ಟ್ರಂಪ್‌ರ ಕಾರು ಕಾಯುತ್ತಿದ್ದಾಗ ತಾನು ಆರೋಗ್ಯ ವರದಿಯನ್ನು ಐದು ನಿಮಿಷದಲ್ಲಿ ಅವಸರವಸರವಾಗಿ ಬರೆದೆ ಎಂದು ಶುಕ್ರವಾರ ಎನ್‌ಬಿಸಿ ನ್ಯೂಸ್‌ಗೆ ಹೇಳಿದ್ದಾರೆ. ‘‘ಅವರನ್ನು ಸಂತೋಷಪಡಿಸುವುದಕ್ಕಾಗಿ ನಾಲ್ಕೈದು ಸಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಬರೆದು ಮುಗಿಸಲು ನಾನು ಪ್ರಯತ್ನಿಸಿದೆ’’ ಎಂದು ನ್ಯೂಯಾರ್ಕ್‌ನ ಲೆನೊಕ್ಸ್ ಹಿಲ್ ಆಸ್ಪತ್ರೆಯ ವೈದ್ಯ ಹ್ಯಾರಲ್ಡ್ ಬಾರ್ನ್‌ಸ್ಟೀನ್ ತಿಳಿಸಿದರು. ‘‘ಅವಸರದಲ್ಲಿ, ಕೆಲವು ಸಾಲುಗಳು ಅವುಗಳು ನಿಖರವಾಗಿ ಹೇಗೆ ಬರಬೇಕಿತ್ತೊ ಹಾಗೆ ಬರಲಿಲ್ಲ’’ ಎಂದರು. ತಾನು ಟ್ರಂಪ್‌ಗೆ ನೀಡಿದ ಮೂಲ ವೈದ್ಯಕೀಯ ಪ್ರಮಾಣಪತ್ರಕ್ಕೆ ಬದ್ಧನಾಗಿದ್ದೇನೆ ಎಂದು ಬಾರ್ನ್‌ಸ್ಟೀನ್ ತಿಳಿಸಿದರು. ‘‘ಅವರ ಆರೋಗ್ಯ, ವಿಶೇಷವಾಗಿ ಅವರ ಮಾನಸಿಕ ಆರೋಗ್ಯ ಅದ್ಭುತವಾಗಿದೆ’’ ಎಂದು ವೈದ್ಯರು ನಗುತ್ತಾ ಹೇಳಿದರು.