ಶಾರುಕ್‌ಗೆ ವಿಶೇಷ ಚಪ್ಪಲಿ ತಯಾರಿಸಿದ ಪಾಕಿ ಜೈಲಿಗೆ!
ಪೇಶಾವರ, ಆ. 27: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್‌ಖಾನ್‌ರಿಗೆ ತಾನು ಪೇಶಾವರಿ ಚಪ್ಪಲಿಗಳನ್ನು ಕಳುಹಿಸುತ್ತಿದ್ದೇನೆ ಎಂದು ಹೇಳಿರುವ ಪಾಕಿಸ್ತಾನದ ಚಪ್ಪಲಿ ತಯಾರಕರೊಬ್ಬರನ್ನು ಜೈಲಿಗಟ್ಟಲಾಗಿದೆ!
ಆದರೆ, ಅವರನ್ನು ಜೈಲಿಗಟ್ಟಿರುವುದು ಭಾರತೀಯ ನಟನಿಗೆ ಚಪ್ಪಲಿಗಳನ್ನು ಕಳುಹಿಸುವ ಘೋಷಣೆ ಮಾಡಿರುವುದಕ್ಕಲ್ಲ; ಆ ಚಪ್ಪಲಿಗಳನ್ನು ಜಿಂಕೆಯ ಚರ್ಮದಿಂದ ತಯಾರಿಸಿರುವುದಕ್ಕಾಗಿ. ಶಾರುಕ್ ಖಾನ್‌ರ ಪೇಶಾವರದಲ್ಲಿ ವಾಸಿಸುತ್ತಿರುವ ಸಂಬಂಧಿಯೊಬ್ಬರು ಕಳೆದ ಶುಕ್ರವಾರ ಚಪ್ಪಲಿ ತಯಾರಕ ಜಹಾಂಗೀರ್ ಖಾನ್‌ರ ಬಳಿ ಹೋಗಿ, ಬಾಲಿವುಡ್ ನಟನಿಗೆ ಎರಡು ಜೊತೆ ಪೇಶಾವರಿ ಚಪ್ಪಲಿಗಳನ್ನು ತಯಾರಿಸುವಂತೆ ಬೇಡಿಕೆ ಸಲ್ಲಿಸಿದ್ದರು.
‘‘ಜಹಾಂಗೀರ್ ಖಾನ್ ಶಾರುಕ್ ಖಾನ್‌ರ ಡೊಡ್ಡ ಅಭಿಮಾನಿ. ಹಾಗಾಗಿ, ಬಾಲಿವುಡ್ ನಟನಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಲು ನಿರ್ಧರಿಸಿದರು... ಜಿಂಕೆಯ ಚರ್ಮದಿಂದ ತಯಾರಿಸಿದ ಪೇಶಾವರಿ ಚಪ್ಪಲಿಗಳು’’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ‘‘ತಕ್ಷಣ ಈ ಸುದ್ದಿ ಎಲ್ಲೆಡೆ ಹರಡಿತು. ವನ್ಯಜೀವಿ ಇಲಾಖೆಯ ಅಧಿಕಾರಿಯೊಬ್ಬರು ನಮ್ಮನ್ನು ಸಂಪರ್ಕಿಸಿ ದೂರು ಸಲ್ಲಿಸಿದರು. ನಾವು ಹೋಗಿ ಜಹಾಂಗೀರ್‌ರನ್ನು ಎತ್ತಿಕೊಂಡು ಬಂದೆವು. ಅವರು ಈಗ ಜೈಲಿನಲ್ಲಿದ್ದಾರೆ’’ ಎಂದರು.
ಚಪ್ಪಲಿಗಳನ್ನು ತಯಾರಿಸಲು ಜಹಾಂಗೀರ್ ಜಿಂಕೆಯ ಚರ್ಮವನ್ನು ಬಳಸಿದರೆ ಎಂಬುದನ್ನು ಖಚಿತಪಡಿಸಲು ತನಿಖೆ ನಡೆಯುತ್ತಿದೆ’’ ಎಂದು ಪೊಲೀಸ್ ಅಧಿಕಾರಿ ಹೇಳಿದರು.ಪಾಕಿಸ್ತಾನದಲ್ಲಿ ಶಾರುಕ್ ಖಾನ್ ಭಾರೀ ಖ್ಯಾತಿ ಹೊಂದಿದ್ದಾರೆ.