ಸ್ಮಾರ್ಟ್ ಫೋನ್‌ನಲ್ಲಿ ದಾರಿ ನೋಡಿ ಎಡವಿದ ಪರ್ವತಾರೋಹಿ ದಂಪತಿ, ಪತ್ನಿ ಸಾವು
ಲಂಡನ್, ಆ.28: ಸ್ಮಾರ್ಟ್‌ಫೋನ್ ಆಪ್ ಮೂಲಕ ದಾರಿ ನೋಡಿದ ಪರ್ವತಾರೋಹಿ ದಂಪತಿ ಎಡವಿಬಿದ್ದು, ಪತ್ನಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ದಂಪತಿ 3000 ಅಡಿ ಎತ್ತರದ ಪರ್ವತದಿಂದ ಕೆಳಗೆ ಇಳಿಯುತ್ತಿದ್ದ ವೇಳೆ ಪತಿ ಪಥದರ್ಶಕ ಆಪ್ ಮೂಲಕ ದಾರಿಯನ್ನು ಹುಡುಕಿದರು. ಬಹುಶಃ ಅದು ತಪ್ಪಾಗಿ ದಾರಿ ತೋರಿಸಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿರಬೇಕು ಎಂದು ಅಂದಾಜು ಮಾಡಲಾಗಿದೆ.
ಜೇನ್ ವಿಲ್ಸನ್ (53) ಹಾಗೂ ಗ್ಯಾರಿ ದಂಪತಿ ಮುಸ್ಸಂಜೆ ವೇಳೆ ವೇಲ್ಸ್‌ನ ಸ್ನೋಡೋನಿಯಾದ ಟ್ರೈಫಾನ್ ಶಿಖರದಿಂದ ಕೆಳಗಿಳಿಯಲು ಸುರಕ್ಷಿತ ಮಾರ್ಗವನ್ನು ಈ ಆಪ್‌ನಲ್ಲಿ ಹುಡುಕಿದರು. ಅದನ್ನು ಅನುಸರಿಸಿ ಇಳಿಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ತನಿಖೆ ನಡೆದಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಕಾಗದದ ನಕ್ಷೆ ಬಳಸುವ ಬದಲು ವಿಲ್ಸನ್, ಆರ್ಡಿನೆನ್ಸ್ ಸರ್ವೆ ಎಂಬ ನ್ಯಾಷನಲ್ ಮ್ಯಾಪಿಂಗ್ ಏಜೆನ್ಸಿಯ ಸ್ಮಾರ್ಟ್‌ಫೋನ್ ಆ್ಯಪ್ನಲ್ಲಿ ನಕ್ಷೆಯನ್ನು ನೋಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಅನುಭವಿ ಪರ್ವತಾರೋಹಿಗಳಾಗಿದ್ದು, ಪರ್ವತಾರೋಹಣ ವೇಳೆ ಶಿಖರ ಏರುವ ಬದಲು ಸ್ಮಾರ್ಟ್‌ಫೋನ್ ನಕ್ಷೆ ಬಳಸಿ ಪಶ್ಚಿಮ ಮುಖದತ್ತ ಹೊರಟಿದ್ದರು ಎನ್ನಲಾಗಿದೆ. ಗ್ಯಾರಿ ಪರ್ವತದ ಅಂಚಿನಲ್ಲಿದ್ದರೆ, ಪತ್ನಿ ಮತ್ತಷ್ಟು ಮುಂದಕ್ಕೆ ಹೋಗಿದ್ದರು. ಆಗ ಬಂಡೆ ಉರುಳಿ ಈ ದುರಂತ ಸಂಭವಿಸಿದೆ.