ಕನೆಕ್ಟಿಕಟ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಜಯಿಸಿದ ಸಾನಿಯಾ-ಮೋನಿಕಾ
ನ್ಯೂಹೆವೆನ್, ಆ.28: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ತನ್ನ ಜೊತೆಗಾರ್ತಿ ರೂಮೇನಿಯಾದ ಮೋನಿಕಾ ನಿಕ್ಯೂಲೆಸ್ಕೋ ಜೊತೆಗೂಡಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಯುಎಸ್ ಓಪನ್‌ಗಿಂತ ಮೊದಲು ಯಶಸ್ಸು ಗಳಿಸಿದ್ದಾರೆ.
ಸಾನಿಯಾ ಮತ್ತು ಮೋನಿಕಾ ಅವರು ಉಕ್ರೈನ್‌ನ ಕ್ಯಾಥೆರ್ನಾ ಬೊಂಡಾರೆಂಕೊ ಮತ್ತು ತೈವಾನ್‌ನ ಚುಯಂಗ್ ಚಿಯಾ ವಿರುದ್ಧ 7-5, 6-4 ಸೆಟ್‌ಗಳಿಂದ ಜಯ ದಾಖಲಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಒಂದು ಗಂಟೆ ಮತ್ತು 30 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಸಾನಿಯಾ ಮತ್ತು ಮೋನಿಕಾ ಕಠಿಣ ಸವಾಲು ಎದುರಿಸಿದರು. 2010ರಲ್ಲಿ ಸಾನಿಯಾ ಮತ್ತು ಮೊನಿಕಾ ಜೊತೆಯಾಗಿದ್ದರು. ವೆಸ್ಟರ್ನ್ ಮತ್ತು ಸೌತರ್ನ್ ಓಪನ್‌ನಲ್ಲಿ ಕ್ವಾಟರ್ ಫೈನಲ್ ತಲುಪಿದ್ದರು. ಒಂದು ಟೂರ್ನಮೆಂಟ್‌ನಲ್ಲಿ ಜೊತೆಯಾಗಿ ಆಡಿದ್ದರು.
ಸಾನಿಯಾ ಮತ್ತು ಮಾರ್ಟಿನ್ ಹಿಂಗಿಸ್ ಅವರು ಜೊತೆಯಾಗಿ ಕೆಲವು ಟೂರ್ನಮೆಂಟ್‌ಗಳಲ್ಲಿ ಆಡಿದ್ದಾರೆ. ಆದರೆ ಇತ್ತೀಚೆಗೆ ಸಾನಿಯಾ ಮತ್ತು ಮಾರ್ಟಿನಾ ಡಬಲ್ಸ್ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಇತ್ತೀಚೆಗೆ ನಡೆದ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಮೆಂಟ್‌ನಲ್ಲಿ ಸಾನಿಯಾ ಅವರು ಜೆಕ್ ಗಣರಾಣ್ಯದ ಬಾರ್ಬೊರಾ ಸ್ಟೈಕೋವಾ ಅವರ ಜತೆ ಕಣಕ್ಕಿಳಿದು ಅಮೆರಿಕಾದ ಕೊಕೊ ವಂಡೆವೆಘು ಮತ್ತು ಮಾರ್ಟಿನಾ ಹಿಂಗಿಸ್‌ರನ್ನು ಸೋಲಿಸಿ ಮಹಿಳೆಯರ ಡಬಲ್ಸ್‌ನಲ್ಲಿ ನಂ.1 ಸ್ಥಾನಕ್ಕೆ ತಲುಪಿದ್ದರು. ಮಾರ್ಟಿನಾ ಹಿಂಗಿಸ್ ಅವರಿಂದ ಬೇರ್ಪಟ್ಟ ಬಳಿಕ ಸಾನಿಗೆ ಇದು ಮೊದಲ ಟೂರ್ನಮೆಂಟ್ ಆಗಿತ್ತು.
ಸಾನಿಯಾ ಮತ್ತು ಮೋನಿಕಾ ಅವರದ್ದು ದೀರ್ಘಾವಧಿಯ ಜೊತೆಯಾಟವಲ್ಲ. ಯುಎಸ್ ಓಪನ್‌ನಲ್ಲಿ ಅವರ ಅಧಿಕೃತ ಜೊತೆಗಾರರೊಂದಿಗೆ ಕಣಕ್ಕಿಳಿಯಲಿದ್ದಾರೆ. ಸಾನಿಯಾ ಅವರು ಬಾರ್ಬೊರಾ ಸ್ಟೈಕೋವಾ ಅವರ ಜತೆ ಯುಎಸ್ ಒಪನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.