ಚಿನ್ನದ ಸಿಂಹಾಸನ ಮೈಸೂರು ರಾಜಕುಟುಂಬದ ವಶದಲ್ಲಿರುವುದನ್ನು ಪ್ರಶ್ನಿಸಿದ್ದ ಅರ್ಜಿ ವಜಾ

Update: 2016-08-28 14:42 GMT

ಹೊಸದಿಲ್ಲಿ,ಆ.28: ಮೈಸೂರು ಅರಮನೆಯಲ್ಲಿರಿಸಲಾಗಿರುವ,ದಸರಾ ಆಚರಣೆಗಳಲ್ಲಿ ಬಳಸಲಾಗುವ ಚಿನ್ನದ ಸಿಂಹಾಸನ ಮತ್ತು ಚಿನ್ನದ ಅಂಬಾರಿ ರಾಜಕುಟುಂಬದ ವಶದಲ್ಲಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

ಈ ವಿಷಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ನೇತೃತ್ವದ ಪೀಠವು ಅರ್ಜಿದಾರ ಪಿ.ವಿ.ನಂಜರಾಜ ಅರಸ್ ಅವರಿಗೆ ಸೂಚಿಸಿತು. ಮೈಸೂರು ಅರಮನೆ(ಸ್ವಾಧೀನ ಮತ್ತು ವರ್ಗಾವಣೆ)ಕಾಯ್ದೆ, 1998 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಮೈಸೂರಿನ ಹಿಂದಿನ ಯುವರಾಜ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರಿಗೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ರಾಜ್ಯ ಸರಕಾರವು ಗೌರವಧನವನ್ನು ಪಾವತಿಸುತ್ತಿರುವುದನ್ನು ಅರಸ್ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ದಸರಾ ಆಚರಣೆಗಳಿಗಾಗಿ ಚಿನ್ನದ ಸಿಂಹಾಸನ ಮತ್ತು ಚಿನ್ನದ ಅಂಬಾರಿಯನ್ನು ನೀಡುವಂತೆ ಕೋರಿ ರಾಜ್ಯ ಸರಕಾರವು ರಾಜಕುಟುಂಬಕ್ಕೆ ಗೌರವಧನವನ್ನು ಪಾವತಿಸುತ್ತದೆ.

ಮೈಸೂರು ಅರಮನೆ(ಸ್ವಾಧೀನ ಮತ್ತು ವರ್ಗಾವಣೆ)ಕಾಯ್ದೆ,1998 ಊರ್ಜಿತದಲ್ಲಿದೆ ಮತ್ತು ಸರಕಾರವು ಮೈಸೂರು ಅರಮನೆಯನ್ನು 1978ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ,ಆದರೆ ಅದು ಈಗಲೂ ರಾಜಕುಟುಂಬಕ್ಕೆ ಗೌರವಧನವನ್ನು ಪಾವತಿಸುತ್ತಿದೆ ಎಂದು ಅರಸ್ ಅರ್ಜಿಯಲ್ಲಿ ವಾದಿಸಿದ್ದರು.

ಹಿಂದಿನ ರಾಜಕುಟುಂಬಗಳಿಗೆ ನೀಡಲಾಗುತ್ತಿದ್ದ ರಾಜಧನ ಮತ್ತು ಇತರ ಸೌಲಭ್ಯಗಳನ್ನು 1971ರ 21ನೇ ತಿದ್ದುಪಡಿ ಕಾಯ್ದೆಯಡಿ ಭಾರತ ಸರಕಾರವು ರದ್ದುಗೊಳಿಸಿರುವುದರಿಂದ ಮೈಸೂರು ರಾಜಕುಟುಂಬಕ್ಕೆ ಗೌರವಧನ ಪಾವತಿಯು ಕಾನೂನು ಬಾಹಿರವಾಗಿದೆ ಎಂದೂ ಅವರು ಬೆಟ್ಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News