ಆಕಾಶದಲ್ಲಿ ಕಳಚಿ ಬಿದ್ದ ವಿಮಾನದ ಇಂಜಿನ್;ಸುರಕ್ಷಿತ ತುರ್ತು ಭೂಸ್ಪರ್ಶ
ನ್ಯೂಯಾರ್ಕ್, ಆ. 28: ಮೆಕ್ಸಿಕೊ ಕೊಲ್ಲಿಯ ಮೇಲೆ ಸಾವಿರಾರು ಅಡಿ ಎತ್ತರದ ಆಕಾಶದಲ್ಲಿ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನವೊಂದರ ಇಂಜಿನ್‌ನ ಭಾಗವೊಂದು ಕಳಚಿ ಬಿದ್ದಿದ್ದು, ನೂರಕ್ಕೂ ಅಧಿಕ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ.
ವಿಮಾನ ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದು, ಆತಂಕಿತ ಪ್ರಯಾಣಿಕರು ಕೊನೆಗೂ ನಿರಾಳವಾಗಿ ಉಸಿರಾಡಿದರು.
ನ್ಯೂ ಆರ್ಲಿನ್ಸ್‌ನಿಂದ ಫ್ಲೋರಿಡದ ಒರ್ಲಾಂಡೊಗೆ ಹಾರುತ್ತಿದ್ದ ವಿಮಾನದ ಒಂದು ಇಂಜಿನ್ ಮೆಕ್ಸಿಕೊ ಕೊಲ್ಲಿಯಲ್ಲಿ ಕಳಚಿ ಬಿದ್ದ ನಂತರ ವಿಮಾನವು ಪೆನ್ಸಕೋಲದಲ್ಲಿ ತುರ್ತು ಭೂಸ್ಪರ್ಶ ನಡೆಸಿತು ಎಂದು ‘ನ್ಯೂಯಾರ್ಕ್ ಡೇಲಿ ನ್ಯೂಸ್’ ವರದಿ ಮಾಡಿದೆ.
ಸ್ಥಳೀಯ ಸಮಯ ಶನಿವಾರ ಬೆಳಗ್ಗೆ 9:20ಕ್ಕೆ 30,700 ಅಡಿ ಎತ್ತರದಲ್ಲಿ ವಿಮಾನದ ಎಡಗಡೆ ಸ್ಫೋಟದ ಸದ್ದು ಕೇಳಿ ಪ್ರಯಾಣಿಕರು ಹೆದರಿದರು. ಹೊರಗೆ ಕಾಣುವ ಟರ್ಬೈನ್ ಬ್ಲೇಡ್‌ಗಳಿಂದ ಹೊಗೆ ಬರುತ್ತಿರುವುದನ್ನು ಅವರು ಕಿಟಿಕಿಗಳಿಂದ ನೋಡಿದರು. ತಕ್ಷಣ ವಿಮಾನವು ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಹಾಗೂ ತನ್ನ ದಿಕ್ಕನ್ನು ಬದಲಿಸಿ 9:45ರ ವೇಳೆಗೆ ಪೆನ್ಸಕೋಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿತು.