×
Ad

ಮಾಂಸಾಹಾರಿಯಾಗಿರುವುದಕ್ಕೆ ಫ್ಲಾಟ್ ನಿರಾಕರಣೆ!

Update: 2016-08-28 23:09 IST

ಮುಂಬೈ, ಆ.28: ತನ್ನ ಆಹಾರಾಭ್ಯಾಸದ ಕಾರಣಕ್ಕಾಗಿ ನಿರ್ಮಾಣ ಸಂಸ್ಥೆಯೊಂದು ಪಶ್ಚಿಮದ ಉಪನಗರವೊಂದರಲ್ಲಿ ತನಗೆ ಅಪಾರ್ಟ್ ಮೆಂಟೊಂದನ್ನು ಮಾರಲು ನಿರಾಕರಿಸಿದೆಯೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ(ಎಂಎನ್‌ಎಸ್) ಕಾರ್ಪೊರೇಟರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಆದಾಗ್ಯೂ ನಿರ್ಮಾಣ ಸಂಸ್ಥೆ ಈ ಆರೋಪವನ್ನು ನಿರಾಕರಿಸಿದೆ.
ಶ್ರೀಧರಂ ಗ್ರೂಪ್ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬೃಹನ್ಮುಂಬೈ ಮಹಾನಗರಪಾಲಿಕೆಯ ದಾದರ್‌ನ ಕಾರ್ಪೊರೇಟರ್ ಸಂತೋಷ್ ಧುರಿ ಶುಕ್ರವಾರ ದಾದರ್ ಪೊಲೀಸರಿಗೆ ದೂರು ನೀಡಿದ್ದಾರೆ.ೋರೆಗಾಂವ್‌ನ ಶ್ರೀಧರಂ ಕ್ಲಾಸಿಕ್ ಯೋಜನೆಯಲ್ಲಿ ಫ್ಲಾಟ್ ಒಂದನ್ನು ಬುಕ್ ಮಾಡುವ ಬಗ್ಗೆ ತಾನು ನಗರದ ಶ್ರೀಧರಂ ಗ್ರೂಪ್‌ನಲ್ಲಿ ವಿಚಾರಣೆ ನಡೆಸಿದ್ದೆ. ಈ ಯೋಜನೆಯಲ್ಲಿ ಪಶ್ಚಿಮ ಗೋರೆಗಾಂವ್‌ನಲ್ಲಿ 2 ಹಾಗೂ 3 ಬಿಕೆಎಚ್ ಫ್ಲಾಟ್‌ಗಳಿವೆ. ತಾನು ಫ್ಲಾಟ್ ಬುಕ್ ಮಾಡಲು ಸಂಸ್ಥೆಯನ್ನು ಸಂಪರ್ಕಿಸಿದಾಗ ಮಾರಾಟ ಕಾರ್ಯವಾಹಕಿಯೊಬ್ಬಳು ತಾನು ಸಸ್ಯಾಹಾರಿಯೇ ಎಂದು ಕೇಳಿದಳು. ತಾನು ಮಿಶ್ರಾಹಾರಿಯೆಂದು ಆಕೆಗೆ ತಿಳಿಸಿದಾಗ, ಫ್ಲಾಟ್‌ಗಳು ಕೇವಲ ಸಸ್ಯಾಹಾರಿಗಳಿಗಷ್ಟೇ ಸೀಮಿತವಾಗಿವೆ. ಏಕೆಂದರೆ ಸಂಕೀರ್ಣದಲ್ಲಿ ಜೈನ ದೇವಾಲಯವೊಂದನ್ನು ನಿರ್ಮಿಸಲಾಗುವುದೆಂದು ಮಹಿಳೆ ತಿಳಿಸಿದಳು. ಇದರಿಂದ ತನಗೆ ಕೆಟ್ಟದೆನಿಸಿ ತನ್ನ ಧಾರ್ಮಿಕ ಭಾವನೆಗೆ ನೋವಾಗಿದೆ. ಆ ಬಳಿಕ ತಾನು ಕಾರ್ಯವಾಹಿಯೊಂದಿಗೆ ನಡೆಸಿದ ಸಂಭಾಷಣೆಯ ಸಿಡಿಯೊಂದಿಗೆ ದಾದರ್‌ನ ಹಿರಿಯ ಪೊಲೀಸ್ ನಿರೀಕ್ಷಕರಿಗೆ ದೂರು ನೀಡಿದೆ. ಪೊಲೀಸರು ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರೆಂಬ ಭರವಸೆ ತನಗಿದೆಯೆಂದು ಧುರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News