ಒಬಿಸಿ ಮೀಸಲಾತಿ ನಿಯಮಗಳಲ್ಲಿ ಸಡಿಲಿಕೆ ಸಾಧ್ಯತೆ
ಹೊಸದಿಲ್ಲಿ,ಆ.28: ಅಭ್ಯರ್ಥಿಗಳ ಕೊರತೆಯಿಂದಾಗಿ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾಗಿರುವ ಸರಕಾರಿ ಉದ್ಯೋಗಗಳಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿರುವ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ವಾರ್ಷಿಕ ಎಂಟು ಲಕ್ಷ ರೂ.ಗೆ ಹೆಚ್ಚಿಸುವ ಮೂಲಕ ‘ಕೆನೆಪದರ ’ಮಾನದಂಡವನ್ನು ಸಡಿಲಿಸಲು ಸರಕಾರವು ಚಿಂತನೆ ನಡೆಸಿದೆ.
ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.27ರಷ್ಟು ಸ್ಥಾನಗಳನ್ನು ಕುಟುಂಬದ ವಾರ್ಷಿಕ ಆದಾಯ ಆರು ಲ.ರೂ ಮೀರದ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಆರು ಲಕ್ಷ ರೂ.ಗಿಂತ ಹೆಚ್ಚಿನ ಆದಾಯವುಳ್ಳವರು ಕೆನೆಪದರ ವರ್ಗಕ್ಕೆ ಸೇರುತ್ತಿದ್ದು, ಮೀಸಲಾತಿ ಪಡೆಯಲು ಅರ್ಹರಲ್ಲ. ಈ ಮಿತಿಯನ್ನು ಹೆಚ್ಚಿಸಿದರೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಹೆಚ್ಚಿನ ಅಭ್ಯರ್ಥಿಗಳು ಲಭಿಸುತ್ತಾರೆ.
ಒಬಿಸಿಗಳ ವಾರ್ಷಿಕ ಆದಾಯ ಮಿತಿಯನ್ನು ಎಂಟು ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ಸಾಮಾಜಿಕ ನ್ಯಾಯ ಸಚಿವಾಲಯವು ಸಿದ್ಧಗೊಳಿಸುತ್ತಿದ್ದು, ಶೀಘ್ರವೇ ಸಂಪುಟ ಟಿಪ್ಪಣಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
....................................................................
ಕಾರೈಕಲ್‌ಗೆ ಕಾವೇರಿ ನೀರು: ತ್ವರಿತ ಕ್ರಮಕ್ಕಾಗಿ ಆಗ್ರಹ
ಪುದುಚೇರಿ,ಆ.28: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೊಳಿಸುವಲ್ಲಿ ಕರ್ನಾಟಕವು ತಳೆದಿರುವ ನಕಾರಾತ್ಮಕ ನಿಲುವಿನಿಂದ ಕಾವೇರಿ ನೀರನ್ನೇ ಅವಲಂಬಿಸಿರುವ ಕಾರೈಕಲ್‌ನ ರೈತರಿಗೆ ತೊಂದರೆಯಾಗುತ್ತಿದೆ ಎಂದು ರವಿವಾರ ಇಲ್ಲಿ ಹೇಳಿದ ಪ್ರತಿಪಕ್ಷ ಎಡಿಎಂಕೆ,ಹಾಲಿ ನಡೆಯುತ್ತಿರುವ ಮುಂಗಡಪತ್ರ ಅಧಿವೇಶನದಲ್ಲಿ ಕರ್ನಾಟಕದ ಈ ನಿಲುವನ್ನು ಖಂಡಿಸಿ ನಿರ್ಣಯವೊಂದನ್ನು ಮಂಡಿಸುವಂತೆ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರನ್ನು ಆಗ್ರಹಿಸಿದೆ.
ಕರ್ನಾಟಕದ ನಿಲುವು ತಮಿಳುನಾಡಿನ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಇದರ ಪರಿಣಾಮವಾಗಿ ಕಾವೇರಿ ನದಿಪಾತ್ರದ ತುದಿಯಲ್ಲಿರುವ ಕಾರೈಕಲ್ ಪ್ರದೇಶದ ರೈತರೂ ಬವಣೆ ಅನುಭವಿಸುವಂತಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ ಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎ.ಅನ್ಬಳಗನ್ ಅವರು, ನೀರನ್ನು ಬಿಡುಗಡೆಗೊಳಿಸಿ ಕಾರೈಕಲ್‌ನ ರೈತರನ್ನು ರಕ್ಷಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.
ಪುದುಚೇರಿಯ ಪಾಲಿನ ನೀರನ್ನು ಪಡೆದುಕೊಳ್ಳಲು ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಬೇಕು ಎಂದೂ ಅವರು ಹೇಳಿದರು.
ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ಪುದುಚೇರಿ ಏಳು ಟಿಎಂಸಿ ಕಾವೇರಿ ನೀರಿನ ಹಕ್ಕು ಹೊಂದಿದೆ.