ಸ್ಕ್ರಾಮ್ ಜೆಟ್ ಇಂಜಿನ್ ಪರೀಕ್ಷೆ ಯಶಸ್ವಿ
Update: 2016-08-28 23:33 IST
ಚೆನ್ನೈ, ಆ.28: ಭಾರತವು ರವಿವಾರ ರಾಕೆಟೊಂದರ ಉಡಾವಣೆ ನಡೆಸಿ ತನ್ನದೇ ಆದ ಸ್ಕ್ರಾಮ್ ಜೆಟ್ ಅಥವಾ ಗಾಳಿಯನ್ನುಸಿರಾಡುವ ಯಂತ್ರದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆಯೆಂದು ಇಸ್ರೊದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭಿಯಾನವು ಯಶಸ್ವಿಯಾಗಿದೆ. ಹಾರಾಟದ ವೇಳೆ 2 ಸ್ಕ್ರಾಮ್ ಜೆಟ್ ಇಂಜಿನ್‌ಗಳನ್ನು ಪರೀಕ್ಷಿಸಲಾಯಿತೆಂದು ಅವರು ಹೇಳಿದ್ದಾರೆ.
ನಿಗದಿತ ಸಮಯ ಮುಂಜಾನೆ 6 ಗಂಟೆಗೆ 2 ಹಂತಗಳ ಆರ್‌ಎಚ್-560 ಸಶಬ್ದ ರಾಕೆಟ್, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ರಾಕೆಟ್ ನಿಲ್ದಾಣದಿಂದ ಆಗಸಕ್ಕೆ ಚಿಮ್ಮಿತೆಂದು ಅಧಿಕಾರಿ ತಿಳಿಸಿದ್ದಾರೆ.
ಎರಡು ಗಾಳಿಯನ್ನುಸಿರಾಡುವ ಇಂಜಿನ್‌ಗಳು ರಾಕೆಟ್‌ನ ಬದಿಗಳಲ್ಲಿ ಅಪ್ಪಿಕೊಂಡಂತಿದ್ದವು. ಸಾಮಾನ್ಯವಾಗಿ ರಾಕೆಟ್ 11 ಕಿ.ಮೀ. ಎತ್ತರ ತಲುಪಿದ ಬಳಿಕ ಸ್ಕ್ರಾಮ್ ಜೆಟ್ ಇಂಜಿನ್‌ಗಳು ಗಾಳಿಯನ್ನುಸಿರಾಡಲಾರಂಭಿಸುತ್ತವೆಂದು ಅವರು ವಿವರಿಸಿದ್ದಾರೆ.