×
Ad

ಜಬಲ್ಪುರ: ಕೂದಲಳತೆಯಲ್ಲಿ ತಪ್ಪಿದ ಬಸ್-ವಿಮಾನ ಢಿಕ್ಕಿ

Update: 2016-08-28 23:36 IST

ಜಬಲ್ಪುರ, ಆ.28: ಜಬಲ್ಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಸ್ಪೈಸ್‌ಜೆಟ್‌ನ ನಿಂತಿದ್ದ ಬಸ್ಸೊಂದರ ತೀರಾ ಸನಿಹಕ್ಕೆ ಏರ್ ಇಂಡಿಯಾ ವಿಮಾನವೊಂದು ಬಂದಾಗ ಬೆದರಿದ 30 ಮಂದಿ ಪ್ರಯಾಣಿಕರು ಬಸ್‌ನಿಂದ ಕೆಳಗೆ ಧುಮುಕಿ ಪಾರಾದ ಪ್ರಸಂಗ ನಡೆದಿದೆ.
ವಿಮಾನವು ಬಸ್‌ಗೆ ಅಪ್ಪಳಿಸಿತೆಂದೇ ಭಾವಿಸಿದ್ದ ಬಸ್ ಪ್ರಯಾಣಿಕರು ವಿಮಾನದ ರೆಕ್ಕೆ ಅದಕ್ಕೆ ತಾಗದೆ ಹತ್ತಿರದಿಂದ ಹಾದುಹೋದಾಗ ನಿಟ್ಟುಸಿರು ಬಿಟ್ಟಿದ್ದರು.
ಏರ್‌ಇಂಡಿಯಾದ ಎಟಿಆರ್-72 ವಿಮಾನವು ಪಾರ್ಕಿಂಗ್ ಬೇಗೆ ತರಬೇತಿ ಪಡೆದ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಒಯ್ಯದೆ, ಕೇವಲ ಒಬ್ಬ ಸಹಾಯಕನ ನೆರವಿನಿಂದ ಒಯ್ದುದಕ್ಕಾಗಿ ವಿಮಾನಯಾನ ನಿಯಂತ್ರಕ ಸಂಸ್ಥೆ ವಿಮಾನ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
ಏರ್ ಇಂಡಿಯಾದ ಅಲಯನ್ಸ್ ಏರ್(ಎಎ) ವಿಮಾನ ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲು ಇಳಿದಿತ್ತು ಹಾಗೂ ಅದನ್ನು ಪಾರ್ಕಿಂಗ್ ಬೇಗೆ ಮುನ್ನಡೆಸಲಾಗುತ್ತಿತ್ತು. ಅದೇ ವೇಳೆ ಇನ್ನೊಂದು ವಿಮಾನದಲ್ಲಿ ದಿಲ್ಲಿಯಿಂದ ಬಂದಿಳಿದ ಸ್ಪೈಸ್‌ಜೆಟ್ ಪ್ರಯಾಣಿಕರು ಟರ್ಮಿನಲ್‌ಗೆ ಹೋಗುವುದಕ್ಕಾಗಿ ಬಸ್ಸೊಂದನ್ನು ಏರಿದ್ದರು.
 
ಬೆಳಗ್ಗೆ 11:45ರ ವೇಳೆ ಏರ್ ಇಂಡಿಯಾ ವಿಮಾನವು ನಿಗದಿತ ಅಂತರವನ್ನಿರಿಸದೆ ತಮ್ಮ ಬಸ್ಸಿನ ಸನಿಹದಿಂದ ಬರುತ್ತಿರುವುದನ್ನು ಸ್ಪೈಸ್‌ಜೆಟ್‌ನ ರ್ಯಾಂಪ್ ಸಿಬ್ಬಂದಿ ಗಮನಿಸಿದರು. ಅವರು ವಿಮಾನ ಚಾಲಕನ ಗಮನ ಸೆಳೆಯಲು ಪ್ರಯತ್ನಿಸಿದರು. ಇದನ್ನು ನೋಡಿದ ಒಬ್ಬ ಪ್ರಯಾಣಿಕ ಬಸ್‌ನಿಂದ ನೆಗೆದು ಹೊರಗೋಡಿದನು. ಅದನ್ನು ನೋಡಿ ಇತರರೂ ಆತನನ್ನು ಅನುಸರಿಸಿದರೆಂದು ಸ್ಪೈಸ್‌ಜೆಟ್ ದಾಖಲಿಸಿರುವ ಘಟನಾ ವರದಿಯಲ್ಲಿ ಹೇಳಲಾಗಿದೆ. ಸ್ಪೈಸ್‌ಜೆಟ್ ದೂರೊಂದನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ವರದಿಯನ್ನು ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕರಿಗೆ ಕಳುಹಿಸಲಾಗು ವುದೆಂದು ಜಬಲ್ಪುರದ ಡುಮ್ನಾ ವಿಮಾನ ನಿಲ್ದಾಣದ ನಿರ್ದೇಶಕ ರಾಮತನು ಸಾಹಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News