ಇನ್ನು ಈ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ರೊಬೋಟ್ ನಿಂದ ಸ್ವಾಗತ !
ಹೊಸದಿಲ್ಲಿ, ಆ.29: ಮುಂದಿನ ಕೆಲವೇ ವಾರಗಳಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ನಿಮಗೆ ರೋಬೋಟ್‌ಗಳು ಎದುರಾಗಲಿವೆ. ಸುದ್ದಿ ಕೇಳಿ ಅಚ್ಚರಿಪಡಬೇಡಿ. ದೇಶದ ಖಾಸಗಿ ವಲಯದ ಎರಡನೆ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಎಚ್‌ಡಿಎಫ್‌ಸಿ, ಜಪಾನ್ ಮಾದರಿಯನ್ನು ಅನುಕರಿಸಿ, ಹ್ಯುಮನಾಯ್ಡ್ (ರೊಬೋಟ್)ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಜಪಾನ್‌ನ ಟೋಕಿಯೊ ಮಿತ್ಸುಬಿಷಿ ಕಳೆದ ವರ್ಷ ನಾವೊ ಎಂಬ ರೋಬೊಟ್ ನೇಮಕ ಮಾಡಿಕೊಂಡಿದ್ದು, ಇದೇ ಮಾದರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಪ್ರಾಜೆಕ್ಟ್ ಎ ಎಂಬ ಯೋಜನೆಗೆ ಚಾಲನೆ ನೀಡಿದ್ದು, ಕೃತಕ ವಿಚಕ್ಷಣೆಗಾಗಿ ರೋಬೋಟ್ ನಿಯೋಜಿಸಲು ನಿರ್ಧರಿಸಿದೆ. ಈ ರೊಬೋಟ್‌ನ ಹೆಸರನ್ನು ಇನ್ನೂ ಅಂತಿಮಪಡಿಸಬೇಕಿದ್ದು, ಒಂದು ಶಾಖೆಯಲ್ಲಿ ಇದನ್ನು ನಿಯೋಜಿಸಲಾಗುತ್ತದೆ. ಇದರ ಅನುಭವ ಹಿನ್ನೆಲೆಯಲ್ಲಿ ಇತರೆಡೆಗೆ ಯೋಜನೆ ವಿಸ್ತರಿಸಲಾಗುತ್ತದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ.
ಬಹುಶಃ ಮುಂಬೈ ನಗರದ ಒಂದು ಶಾಖೆಯಲ್ಲಿ ಇದನ್ನು ಪರಿಚಯಿಸಲಾಗುತ್ತದೆ. ಆದರೆ ಇದು ಮಿಝೂವಾ ಬ್ಯಾಂಕಿನ ಪೆಪ್ಪರ್‌ನಂತೆ ಗ್ರಾಹಕರ ನಡವಳಿಕೆಗಳನ್ನು ವಿಶ್ಲೇಷಿಸಿ, ವಿವಿಧ ಸೇವೆಗಳನ್ನು ನೀಡುವುದಿಲ್ಲ. ಬದಲಾಗಿ ಸದ್ಯಕ್ಕೆ ಸ್ವಾಗತಕಾರ ಕೆಲಸವನ್ನಷ್ಟೇ ನಿರ್ವಹಿಸಲಿದೆ. ಬ್ಯಾಂಕ್ ಪ್ರವೇಶಿಸುವ ಗ್ರಾಹಕರನ್ನು ಸ್ವಾಗತಿಸಿ, ಯಾವ ವಿಭಾಗದ ಸೇವೆ ಬೇಕು ಎನ್ನುವುದನ್ನು ಪ್ರದರ್ಶಿಸುತ್ತದೆ. ಗ್ರಾಹಕರು ಅದನ್ನು ಪಂಚ್ ಮಾಡಿದ ಬಳಿಕ, ಬ್ಯಾಂಕ್ ಶಾಖೆಯ ನಕ್ಷೆಯನ್ನು ಪ್ರದರ್ಶಿಸಿ, ಅಂತಿಮವಾಗಿ "ಟೇಕ್ ಮಿ ದೇರ್" ಆಯ್ಕೆ ನೀಡಿದರೆ, ಅಲ್ಲಿಗೆ ಕರೆದೊಯ್ಯುತ್ತದೆ.