ಪರ್ಸ್ ಮರೆತು ನಮಾಝಿಗೆ ಹೊರಟವನಿಗೆ ಈ ಆಟೋ ಚಾಲಕ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ ?
ಮುಂಬೈ, ಆ.29: ಆಟೊರಿಕ್ಷಾ ಚಾಲಕನೊಬ್ಬನ ಪ್ರಾಮಾಣಿಕತೆ ಹಾಗೂ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿರುವ ಮತ್ತು ಮತಾಂಧ ಶಕ್ತಿಗಳ ಕಣ್ಣು ತೆರೆಸುವಂತಹ ಘಟನೆಯೊಂದು ಇತ್ತೀಚೆಗೆ ಮುಂಬೈ ಮಹಾನಗರಿಯಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದಿದ್ದು ಈ ಆಟೋಚಾಲಕನ ಹೃದಯ ವೈಶಾಲ್ಯವನ್ನು ಕಣ್ಣಾರೆ ಕಂಡಿರುವ ಮುಂಬೈ ನಿವಾಸಿ ರಮೀಝ್ ಶೇಖ್ ಎಂಬವರ ಫೇಸ್‌ಬುಕ್ ಪೋಸ್ಟ್ ನಿಂದ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು ಸಾವಿರಾರು ಜನರು ಆಟೊಚಾಲಕನ ಹೃದಯವಂತಿಕೆಗೆ ತಲೆಬಾಗಿದ್ದಾರೆ.
ಘಟನೆ ನಡೆದಿದ್ದು ಆಗಸ್ಟ್ 26 ರಂದು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಶೇಖ್, ಅಂದು ಶುಕ್ರವಾರವಾಗಿದ್ದರಿಂದ ಮಸೀದಿಗೆ ನಮಾಝಿಗೆಂದು ಅವಸವಸರವಾಗಿ ಕಚೇರಿಯಿಂದ ಹೊರಟಿದ್ದರು. ಆಟೊರಿಕ್ಷಾವೊಂದನ್ನು ಹತ್ತಿದ ಕೂಡಲೇ ಅವರು ತಾವು ತಮ್ಮ ಪರ್ಸನ್ನು ಕಚೇರಿಯಲ್ಲ್ಲಿಯೇ ಮರೆತು ಬಿಟ್ಟಿದ್ದನ್ನು ನೆನಪಿಸಿಕೊಂಡರು. ಮತ್ತೆ ಕಚೇರಿಗೆ ಹಿಂದಿರುಗಿದರೆ ನಮಾಝ್‌ಗೆ ತಡವಾಗುವುದೆಂದು ಅರಿತು ಆಟೊಚಾಲಕನಲ್ಲಿ ಈ ಬಗ್ಗೆ ಹೇಳಿ, ನಮಾಝ್ ಮುಗಿಯುವ ತನಕ ಅಲ್ಲಿಯೇ ಕಾದು ನಂತರ ತನ್ನನ್ನು ಕಚೇರಿಗೆ ಬಿಟ್ಟರೆ ಹೆಚ್ಚಿನ ಬಾಡಿಗೆ ನೀಡುವುದಾಗಿ ಹೇಳಿದಾಗ ಆ ಆಟೊರಿಕ್ಷಾ ಚಾಲಕನೀಡಿದ ಉತ್ತರ ಎಂಥವರ ಮನವನ್ನೂ ಮುಟ್ಟುವಂತಿತ್ತು.
ರಮೀಝ್ ಶೇಖ್ ಅವರ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ. ‘‘ಗಣಪತಿ ಉತ್ಸವದ ಸ್ಟಿಕ್ಕರ್ ಅಂಟಿಸಲ್ಪಟ್ಟಿದ್ದ ಆಟೊದ ಚಾಲಕ ನನ್ನನ್ನು ನೋಡಿ ‘ನೀವು ದೇವರ ಕಾರ್ಯಕ್ಕಾಗಿ ಹೋಗುತ್ತಿದ್ದೀರಿ, ಟೆನ್ಶನ್ ಮಾಡಿಕೊಳ್ಳಬೇಡಿ. ನಾನು ನಿಮ್ಮನ್ನು ಮಸೀದಿ ತನಕ ಬಿಡುತ್ತೇನೆ. ಆದರೆ ನೀವು ಹಿಂದಿರುಗುವ ತನಕ ನನಗೆ ಕಾಯಲಾಗುವುದಿಲ್ಲ. ನನಗೆ ಮುಂದೆ ಹೋಗುವುದಿದೆ...’’
‘‘ನಾನು ಆಟೋದವನಿಗೆ ಧನ್ಯವಾದ ಹೇಳಿದೆ ಹಾಗೂ ಸ್ವಲ್ಪ ಹೊತ್ತಿನಲ್ಲಿಯೇ ಆಟೋ ಮಸೀದಿ ತಲುಪಿತ್ತು. ಅಲ್ಲಿ ನಾನು ನಂಬಲಾರದ ಘಟನೆಯೊಂದು ನಡೆದಿತ್ತು.ಆಟೋ ಚಾಲಕ ತನ್ನ ಕಿಸೆಯಿಂದ ಸ್ವಲ್ಪ ಹಣ ತೆಗೆದು ನಾನು ನಮಾಝ್ ಮುಗಿಸಿ ಮತ್ತೆ ಕಚೇರಿಗೆ ತೆರಳಲು ಹಣ ನೀಡಿದ. ನನಗಾಗಿ ಕಾದು ನನ್ನನ್ನು ಮತ್ತೆ ಕಚೇರಿಗೆ ಬಿಡುವಷ್ಟು ಆತನಿಗೆ ಸಮಯವಿಲ್ಲದೇ ಇದ್ದರೂ ನನ್ನ ಕೈಯಲ್ಲಿ ಹಣವಿಲ್ಲದೇ ಇರುವುದರಿಂದ ನನಗೆ ಮತ್ತೆ ಕಚೇರಿ ತಲುಪಲು ತೊಂದರೆಯಾಗದಂತೆ ಆತ ನೋಡಿಕೊಂಡಿದ್ದ.’’
ರಮೀಝ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮತ್ತೆ ಈ ರೀತಿ ಬರೆಯಲಾಗಿದೆ ‘‘ಶುಕ್ಲಾ ಜಿಯವರನ್ನು ಭೇಟಿ ಮಾಡಿ (ಅಲ್ಲಿ ಆ ಆಟೋ ಚಾಲಕನ ಚಿತ್ರವನ್ನೂ ಪೋಸ್ಟ್ ಮಾಡಲಾಗಿದೆ) ಸಾಮಾನ್ಯ ಆಟೊಚಾಲಕರಿಗಿಂತ ಭಿನ್ನವಾಗಿರುವ ಈ ‘ಆಟೋವಾಲಾ’ ಹಣೆಯಲ್ಲಿ ದೊಡ್ಡಕೆಂಪು ತಿಲಕವಿಟ್ಟುಕೊಂಡಿರುವ’ ‘ಗಣಪತಿ ಭಕ್ತ್.’ ವ್ಯಕ್ತಿಯೊಬ್ಬ ಯಾವುದೇ ಸಮಸ್ಯೆಯಿಲ್ಲದೆ ಶಾಂತಚಿತ್ತದಿಂದ ತನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸಲಿ ಎಂದು ಆತ ಶ್ರಮಿಸಿದ್ದಾನೆ.’’
ಈ ಹೃದಯಸ್ಪರ್ಶಿ ಪೋಸ್ಟ್ ಅನ್ನು ಈಗಾಗಲೇ 5000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಒಬ್ಬರಂತೂ ‘‘ಯೇ ಹೇ ರಿಯಲ್ ಇಂಡಿಯಾ’’ ಎಂದು ಕಮೆಂಟ್ ಮಾಡಿದ್ದಾರೆ.