ಮುಸ್ಲಿಮ್ ಮಹಿಳೆಯರಿಗೆ ಆತಿಥ್ಯ ನೀಡಲು ನಿರಾಕರಿಸಿದ ಫ್ರಾನ್ಸ್ ರೆಸ್ಟೋರೆಂಟ್

Update: 2016-08-29 14:19 GMT

ಪ್ಯಾರಿಸ್, ಆ. 29: ಪ್ಯಾರಿಸ್‌ನ ಉಪನಗರವೊಂದರಲ್ಲಿನ ರೆಸ್ಟೋರೆಂಟೊಂದು ಇಬ್ಬರು ಮುಸ್ಲಿಮ್ ಮಹಿಳೆಯರಿಗೆ ಆತಿಥ್ಯ ನೀಡಲು ನಿರಾಕರಿಸಿದ್ದು, ಫ್ರಾನ್ಸ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಗಿದೆ ಎಂದು ಬಿಬಿಸಿ ರವಿವಾರ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿರುವ ವೀಡಿಯೊವೊಂದರಲ್ಲಿ ಆಘಾತಕಾರಿ ಸಂಗತಿ ದಾಖಲಾಗಿದೆ. ವೀಡಿಯೊದಲ್ಲಿ ರೆಸ್ಟೋರೆಂಟ್ ಮಾಲೀಕ ಹಿಜಾಬ್‌ಧಾರಿ ಮಹಿಳೆಯರಿಗೆ ಹೀಗೆ ಹೇಳುತ್ತಾನೆ: ‘‘ಭಯೋತ್ಪಾದಕರು ಮುಸ್ಲಿಮರು ಮತ್ತು ಎಲ್ಲ ಮುಸ್ಲಿಮರು ಭಯೋತ್ಪಾದಕರು’’.

ಟ್ರೆಂಬ್ಲೆ ಎನ್ ಫ್ರಾನ್ಸ್‌ನ ಲೆ ಸೆನಾಕಲ್ ರೆಸ್ಟೋರೆಂಟ್‌ನಲ್ಲಿ ಶನಿವಾರ ಘಟನೆ ನಡೆದಿದೆ.

 ಈ ಘಟನೆಗೆ ಪ್ರತಿಕ್ರಿಯೆಯಾಗಿ ರೆಸ್ಟೋರೆಂಟ್‌ನ ಹೊರಗೆ ಸೇರಿದ ಗುಂಪಿನೊಂದಿಗೆ ಹೊಟೇಲ್ ಮಾಲೀಕ ಕ್ಷಮೆ ಯಾಚಿಸಿದ್ದಾನೆ.

ಫ್ರಾನ್ಸ್‌ನ ಬೀಚ್‌ಗಳಲ್ಲಿ ಬುರ್ಕಿನಿ ಧರಿಸುವುದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಾನು ತಾಳ್ಮೆ ಕಳೆದುಕೊಂಡಿದ್ದೇನೆ ಹಾಗೂ ಅದೂ ಅಲ್ಲದೆ, ಕಳೆದ ನವೆಂಬರ್‌ನಲ್ಲಿ ಬಟಕ್ಲಾನ್ ಸಂಗೀತ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತಾನು ಒಬ್ಬ ಸ್ನೇಹಿತನನ್ನೂ ಕಳೆದುಕೊಂಡಿದ್ದೇನೆ ಎಂದು ರೆಸ್ಟೋರೆಂಟ್ ಮಾಲೀಕ ಮುಸ್ಲಿಮ್ ಮಹಿಳೆಯರಿಗೆ ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ.

 ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, ‘‘ಹಾಗಾದರೆ, ನಮಗೆ ಜನಾಂಗೀಯವಾದಿಗಳ ಆತಿಥ್ಯ ಬೇಡ’’ ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಮಾಲೀಕ, ‘‘ಜನಾಂಗೀಯವಾದಿಗಳು ಜನರನ್ನು ಕೊಲ್ಲುವುದಿಲ್ಲ’’ ಎಂದನು.

ಮುಂದುವರಿದ ಆತ, ‘‘ನಿಮ್ಮಂಥ ಜನರು ನನ್ನ ರೆಸ್ಟೋರೆಂಟ್‌ನಲ್ಲಿ ಇರುವುದನ್ನು ನಾನು ಬಯಸುವುದಿಲ್ಲ. ಇನ್ನು ವಾದ ಬೇಡ’’ ಎಂದು ಹೇಳಿದನು.

ತನಿಖೆಗೆ ಆದೇಶ

ರೆಸ್ಟೋರೆಂಟ್ ಮಾಲೀಕರ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಫ್ರಾನ್ಸ್ ಸಚಿವೆ ಲಾರೆನ್ಸ್ ರೊಸಿನಾಲ್, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸರಕಾರಿ ಜನಾಂಗೀಯ ತಾರತಮ್ಯ ನಿಗ್ರಹ ಸಂಸ್ಥೆ ‘ಡಿಲ್ಕ್ರ’ಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇಬ್ಬರು ಸಂತ್ರಸ್ತ ಮಹಿಳೆಯರಿಗೆ ಕಾನೂನು ನೆರವು ಮತ್ತು ಮಾನಸಿಕ ಬೆಂಬಲ ನೀಡುವುದಾಗಿ ಫ್ರಾನ್ಸ್‌ನ ಇಸ್ಲಾಮೊಫೋಬಿಯ ನಿಗ್ರಹ ಸಂಘಟನೆ ಸಿಸಿಐಎಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News