ಮಂಗಳಮುಖಿಯರಿಗೆ ಸರಕಾರಿ ಸೌಲಭ್ಯ ಒದಗಿಸಲು ಪ್ರಯತ್ನ: ಸಂಸದ ನಳಿನ್

Update: 2016-08-31 04:48 GMT

ಮಂಗಳೂರು, ಆ.30: ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ಮಂಗಳಮುಖಿಯರಿಗೆ ಸರಕಾರದಿಂದ ರೇಶನ್ ಕಾರ್ಡ್, ಮತದಾರರ ಚೀಟಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಸಂಸದ ನಳಿನ್‌ಕುಮಾರ್ ಭರವಸೆ ನೀಡಿದರು. ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳಮುಖಿಯರಿಗಾಗಿನ ಪರಿವರ್ತನಾ ಟ್ರಸ್ಟ್‌ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಪರಿವರ್ತನೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಜಿಲ್ಲೆಯಲ್ಲಿ ಆರಂಭವಾದ ಮಂಗಳಮುಖಿಯರ ಪರಿವರ್ತನೆಯ ಕಾರ್ಯ ದೇಶಕ್ಕೆ ದಾರಿದೀಪವಾಗಲಿ ಎಂದು ಹಾರೈಸಿದರು. ಟ್ರಸ್ಟ್‌ನ ಲಾಂಛನವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಪೊಲೀಸ್ ಇಲಾಖೆ ಸೇರಿದಂತೆ ಸಮಾಜದಲ್ಲಿ ಎಲ್ಲಾ ಹಂತದಲ್ಲೂ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯ ಅಥವಾ ಆ ಗುಂಪನ್ನೇ ದೂಷಿಸುವ ಮನೋಭಾವ ಬದಲಾಗಬೇಕಿದೆ ಎಂದು ಹೇಳಿದರು. ಮಂಗಳಮುಖಿಯರ ಕುರಿತಂತೆ ಪೊಲೀಸ್ ಇಲಾಖೆಯಲ್ಲಿನ ಮನೋಭಾವವನ್ನು ಬದಲಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಟ್ರಸ್ಟ್ ನೋಂದಣಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಪಾಶ್ಚಾತ್ಯ ರಾಷ್ಟ್ರಗಳಂತೆ ನಮ್ಮಲ್ಲಿಯೂ ಮಂಗಳಮುಖಿಯರಿಗೆ ಸಮಾನ ಸ್ಥಾನಮಾನ, ಎಲ್ಲರಂತೆ ಬದುಕುವ ಹಕ್ಕು ದೊರೆಯಬೇಕಿದೆ. ಕೇರಳದಲ್ಲಿ ಇಂತಹ ಕಾರ್ಯಗಳು ನಡೆಯುತ್ತಿವೆ. ಇದೀಗ ದ.ಕ. ಜಿಲ್ಲೆಯ ಮಂಗಳೂರಿನಲ್ಲೂ ಈ ಪರಿವರ್ತನೆ ಆರಂಭಗೊಂಡಿರುವುದು ಉತ್ತಮ ಎಂದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ ಪಾಟೀಲ್ ಮಾತನಾಡಿದರು. ವೇದಿಕೆಯಲ್ಲಿ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಿರಿಯ ನ್ಯಾಯವಾದಿ ಆಶಾ ನಾಯಕ್ ಸ್ವಾಗತಿಸಿದರು. ಪರಿವರ್ತನಾ ಟ್ರಸ್ಟ್‌ನ ಟ್ರಸ್ಟಿ, ಪತ್ರಕರ್ತೆ ವಾಯ್ಲೆಟ್ ಪಿರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೋನಾ ಮಿಸ್ಕಿತ್ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News