ಸೆ.1ರಂದು ದೇಶಾದ್ಯಂತ ಸ್ಕ್ಯಾನಿಂಗ್ ಸೆಂಟರ್‌ಗಳು ಬಂದ್

Update: 2016-08-30 11:12 GMT

ಪ್ರಸವಪೂರ್ವ ಮತ್ತು ಗರ್ಭಪೂರ್ವ ಲಿಂಗ ಪತ್ತೆ ಕಾಯ್ದೆ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಸೆ.1ರಂದು ಇಂಡಿಯನ್ ರೇಡಿಯೋಲಾಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಶನ್ ವತಿಯಿಂದ ದೇಶಾದ್ಯಂತ ಎಲ್ಲ ರೀತಿಯ ಸಿಟಿ ಸ್ಕ್ಯಾನ್, ಎಂಆರ್‌ಐ ಮತ್ತು ಅಲ್ಟ್ರಾ ಸ್ಕ್ಯಾನ್ ಸೆಂಟರ್‌ಗಳು ಬಂದ್ ನಡೆಸಿ ಪ್ರತಿಭಟಿಸಲಿವೆ ಎಂದು ಡಾ.ರಾಘವೇಂದ್ರ ಭಟ್ ಹೇಳಿದರು.
ಅಂದು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದೈನಂದಿನ ಸ್ಕ್ಯಾನಿಂಗ್ ನಡೆಸುವುದಿಲ್ಲ. ತುರ್ತು ಅನಾರೋಗ್ಯ ಸಂದರ್ಭದಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಂಳಗವಾರ ಅವರು ಹೇಳಿದರು.
ದೇಶದಲ್ಲಿ ಗಂಡು- ಹೆಣ್ಣಿನ ಅನುಪಾತದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ಮಾಡಿಸಿ, ಹೆಣ್ಣು ಭ್ರೂಣ ಎಂದು ಗೊತ್ತಾದಲ್ಲಿ ಹತ್ಯೆ ಮಾಡುತ್ತಾರೆ ಎಂದು 1996ರಲ್ಲಿ ಕಾಯಿದೆ ಜಾರಿಗೆ ತಂದಿದ್ದು, ಮುಂದೆ ಅದರಲ್ಲಿ ತಿದ್ದುಪಡಿ ಮಾಡಲಾಗಿದೆ. ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಕಾಯಿದೆಗೆ ನಮ್ಮ ಸಹಮತವಿದ್ದರೂ, ಇದನ್ನೇ ಹಿಡಿದುಕೊಂಡು ಸತಾಯಿಸುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಗರ್ಭಿಣಿಯರ ಸ್ಕ್ಯಾನ್ ಮಾಡುವ ನಾವೆಂದೂ ಭ್ರೂಣದ ಲಿಂಗ ಯಾವುದೆಂದು ತಿಳಿಸುವುದಿಲ್ಲ. ಲಿಂಗ ಕೇಳಲೇಬಾರದು ಎಂದು ನಾವು ಅವರಿಗೆ ತಿಳಿವಳಿಕೆ ನೀಡುತ್ತೇವೆ. ಆದರೆ, ತಪಾಸಣೆಗೆ ಬರುವ ಅಧಿಕಾರಿಗಳಿಗೆ ಕಾನೂನಿನ ಜ್ಞಾನ ಇರುವುದಿಲ್ಲ. ಕಾನೂನಿನ ಪುಸ್ತಕ ಇಟ್ಟುಕೊಳ್ಳುವಂತೆ ಹೇಳುತ್ತಾರೆ. ನಮ್ಮಲ್ಲಿ ಕನ್ನಡ ಭಾಷೆಯಲ್ಲಿ ಪುಸ್ತಕ ಲಭ್ಯವಿಲ್ಲ, ಅವರೂ ತರುತ್ತಿಲ್ಲ. ಅರ್ಜಿ ತುಂಬಿಸುವಾಗ ಸಣ್ಣ ಲೋಪವಾದರೂ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಹೆಚ್ಚಿನ ಎಲ್ಲ ಕಾಯಿಲೆ ತಪಾಸಣೆಗೆ ಅಲ್ಟ್ರಾ ಸ್ಕ್ಯಾನಿಂಗ್ ಮಾಡಿಸಬೇಕು. ಅದಕ್ಕಾಗಿ ದುಬಾರಿ ಯಂತ್ರ ಅಳವಡಿಸುತ್ತೇವೆ. ಅಧಿಕಾರಿಗಳು ಇದು ಗರ್ಭಿಣಿಯರ ತಪಾಸಣೆಗೆ ಮಾತ್ರ ಇರುವುದು ಎಂದು ಭಾವಿಸುತ್ತಾರೆ. ಗೌನ್(ಏಪ್ರನ್) ಧರಿಸಿ ಸ್ಕ್ಯಾನ್, ಾರ್ಮ್ ಜಿ ತುಂಬಿಸಿಲ್ಲ ಎಂಬ ಕಾರಣಕ್ಕೆ ದಂಡ, ಯಂತ್ರ ಜಪ್ತಿ ಮಾಡುತ್ತಾರೆ. ಇದನ್ನೆಲ್ಲಾ ವಿರೋಧಿಸಿ ಅನಿವಾರ್ಯವಾಗಿ ಒಂದು ದಿನ ಮುಷ್ಕರ ನಡೆಸುತ್ತಿದ್ದು, ಸರಕಾರದ ಸ್ಪಂದಿಸಲಿದ್ದಲ್ಲಿ ಮುಂದೆ ನಿರಂತರ ಮುಷ್ಕರ ನಡೆಯಲಿದೆ ಎಂದು ಅವರು ಎಚ್ಚರಿಸಿದರು.
ಇಂಡಿಯನ್ ರೇಡಿಯೋಲಾಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಶನ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ.ಸಂತೋಷ್ ರೈ, ಪದಾಧಿಕಾರಿಗಳಾದ ಡಾ.ನವೀನ್‌ಚಂದ್ರ ಶೆಟ್ಟಿ, ಡಾ.ಪ್ರವೀಣ್‌ರಾಜ್, ಪ್ರೊ.ಗಣೇಶ್ ಕೆ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News