ಕನ್ನಡಕ್ಕಾಗಿ ಶ್ರಮಿಸಿದ ಶಂಕರನಾರಾಯಣ ನಾವಡರು: ಡಾ.ಚಂದ್ರಗಿರಿ

Update: 2016-08-30 11:52 GMT

ಪುತ್ತೂರು, ಆ.30: ಅಮ್ಮೆಂಬಳ ಶಂಕರನಾರಾಯಣ ನಾವಡ ಅವರು ದಕ್ಷಿಣ ಕನ್ನಡದ ಹಿರಿಯ ಸಾಹಿತಿ. ಅನೇಕ ತತ್ವಶಾಸ್ತ್ರಗಳನ್ನು ಬಹಳ ಹಿಂದೆಯೇ ಅಧ್ಯಯನ ಮಾಡಿದವರು. ಅಲ್ಲದೆ ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪ್ರಾವಿಣ್ಯತೆಯನ್ನು ಹೊಂದಿದವರು. ಎಳವೆಯಲ್ಲಿಯೇ ಕವಿತೆ ರಚನೆಯತ್ತ ಗಮನ ಹರಿಸಿದವರು. ಸ್ಪಷ್ಟವಾದ ಕವಿತೆಗಳ ಮೂಲಕ ಜನರಿಗೆ ಕನ್ನಡದ ಉಳಿವಿನ ಅವಶ್ಯಕತೆಯನ್ನು ತಿಳಿ ಹೇಳಿದವರು. ಕನ್ನಡ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು ಎಂದು ಬೆಟ್ಟಂಪಾಡಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಹೇಳಿದರು.

ಅವರು ಮಂಗಳವಾರ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಬಾಗ ಮತ್ತು ಕನ್ನಡ ಸಂಘದ ಸಹಯೋಗದಲ್ಲಿ ನಡೆದ ಅಮ್ಮೆಂಬಳ ಶಂಕರನಾರಾಯಣ ನಾವಡ ಜನ್ಮಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾದಾ ಸೀದ ವ್ಯಕ್ತಿತ್ವವನ್ನು ಹೊಂದಿದ ನಾವುಡರು ಸಾಧು ಸ್ವಭಾವದವರು. ಮಾನವತೆಗೆ ಹೆಚ್ಚು ಮಹತ್ವವನ್ನು ಕೊಟ್ಟವರು ಅಮ್ಮೆಂಬಳ ಅವರು. ಸಾಹಿತ್ಯದಲ್ಲಿ ಹೆಚ್ಚುಗಾರಿಕೆಯನ್ನು ತೋರಿದವರು. ತಾತ್ವಿಕ ನೆಲೆಗಳ ಬದಲಾಗಿ ಶುದ್ಧ ಸಾಹಿತ್ಯದ ಕವಿತೆಗಳನ್ನು ಬರೆದವರು. ಪ್ರಯೋಗಶೀಲ ಕವಿಯಾಗಿದ್ದರು. ಮಾತ್ರವಲ್ಲದೇ ಪ್ರಕೃತಿ ಸಂಬಂಧಿತ ವಿಚಾರಗಳ ಕವಿತೆಯನ್ನು ರಚಿಸಿದರು. ಇವರ ಕವಿತೆಗಳು ಅನೇಕರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಅಮ್ಮೆಂಬಳ ಅವರು ಸಾಮಾಜಿಕ ವೌಢ್ಯತೆಯ ಬಗ್ಗೆ ಬರೆದವರು. ಸಾಮಾಜಿಕ ಹಿನ್ನಲೆಯನ್ನು ನಾವಡರ ಕವಿತೆಗಳಲ್ಲಿ ಕಾಣಬಹುದು. ಇವರ ಕವಿತೆಗಳನ್ನು ಓದಿದ ಬಳಿಕ ಇವರನ್ನು ಮಂಗಳೂರಿನ ಮಲ್ಲಿಗೆ ಎಂದು ಜನ ಕರೆದಿದ್ದಾರೆ. ಇದರಿಂದ ಇವರ ಸಾಹಿತ್ಯದ ಮಹತ್ವವನ್ನು ಗ್ರಹಿಸಬಹುದಾಗಿದೆ. ಅಲ್ಲದೇ ಕವಿತೆಗಳ ಮೂಲಕ ಹಿಂದಿನ ದಿನಗಳಿಗೂ ಪ್ರಸ್ತುತ ದಿನಗಳಿಗೂ ಸಮನ್ವಯತೆಯನ್ನು ಕೊಟ್ಟವರು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಅಮ್ಮೆಂಬಳ ಅವರು ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದವರು. ಸಾಧು ಸ್ವಭಾವದಿಂದ ಇತರರ ಮನಗೆದ್ದವರು. ಕಾಠಿಣ್ಯದ ಸಂದಭರ್ಗಳಲ್ಲೂ ಸಹಾಯ ಹಸ್ತವನ್ನು ನೀಡಿದವರು. ಮಾತ್ರವಲ್ಲದೇ ಇವರ ಕವಿತೆಗಳು ದೇಶಭಕ್ತಿಯನ್ನು ಹೊರಹೊಮ್ಮಿಸುತ್ತವೆ. ಭಾವನಾತ್ಮಕವಾಗಿ ಜನರ ಮನಸೆಳೆದವರು. ಯುವ ಜನರಿಗೆ ನಾವಡರ ಕವಿತೆಗಳು ಸ್ಫೂರ್ತಿದಾಯಕ ಎಂದು ನುಡಿದರು.

ಕನ್ನಡ ಸಂಘದ ಕಾರ್ಯದರ್ಶಿ ಸೌಮ್ಯಾ.ಬಿ.ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ಸ್ವಾಗತಿಸಿ, ಕನ್ನಡ ವಿಭಾಗ ಉಪನ್ಯಾಸಕ ಡಾ. ರೋಹಿಣಾಕ್ಷ ವಂದಿಸಿದರು. ಕನ್ನಡ ವಿಭಾಗ ಉಪನ್ಯಾಸಕ ಡಾ. ಮನಮೋಹನ ಎಂ. ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News