ಸುಳ್ಯದಲ್ಲಿ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆ: ಅಡಿಕೆ ಬೈಪ್ರಾಡಕ್ಟ್ ಆರಂಭಕ್ಕೆ ಕ್ಯಾಂಪ್ಕೊ ಸಭೆಯಲ್ಲಿ ಆಗ್ರಹ

Update: 2016-08-30 13:07 GMT

ಸುಳ್ಯ, ಆ.30: ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆಯು ಸುಳ್ಯದ ಎಪಿಎಂಸಿ ಆವರಣದಲ್ಲಿರುವ ಕ್ಯಾಂಪ್ಕೊ ಸಭಾಂಗಣದಲ್ಲಿ ನಡೆಯಿತು.

ಸದಸ್ಯರಾದ ಗಿರಿಜಾಶಂಕರ್, ಶ್ರೀಧರ್ ಭಟ್, ಮಾಧವ ನಾಯಕ್, ವಾರಿಜಾ ಕುರುಂಜಿ, ಕೋಡಿ ಪೊನ್ನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಶಂಕರನಾರಾಯಣ ಭಟ್, ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಕೆ.ರಾಜಗೋಪಾಲ, ಜಯರಾಮ ಸರಳಾಯ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ವೇದಿಕೆಯಲ್ಲಿದ್ದರು.

ತೆಂಗು ಖರೀದಿ ಆರಂಭಿಸುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನವೀನ್ ಕುಮಾರ್ ಮೇನಾಲ, ರಬ್ಬರ್ ಪ್ರೊಸೆಸಿಂಗ್ ಯುನಿಟ್ ಆರಂಭಕ್ಕೆ ತೇಜಪ್ರಕಾಶ್ ಸಲಹೆ ನೀಡಿದರು. ಅಡಿಕೆ, ರಬ್ಬರ್, ಕೊಕ್ಕೋ ಬೈಪ್ರಾಡಕ್ಟ್ ತಯಾರಿಸುವಂತೆ ಚಂದ್ರಾ ಕೋಲ್ಚಾರ್, ಅಡಿಕೆಗೆ ಅಡಮಾನ ಸಾಲ ನೀಡುವಂತೆ ಗಣಪತಿ ಭಟ್ ಮಜಿಗುಂಡಿ ಆಗ್ರಹಿಸಿದರು.

ತೊಡಿಕಾನದಲ್ಲಿ ವಾರಕ್ಕೆ 2 ಬಾರಿಯಾದರೂ ಕೊಕ್ಕೋ ಖರೀದಿಸಬೇಕು. ಮಾರುಕಟ್ಟೆ ಧಾರಣೆಯನ್ನು ಸದಸ್ಯ ರೈತರಿಗೆ ಎಸ್‌ಎಂಎಸ್ ಮಾಡಬೇಕು. ಲಾಭಾಂಶದ ಮೇಲೆ ನೀಡುವ ಇನ್ಸೆಂಟಿವ್‌ನ್ನು ಹೆಚ್ಚಿಸಬೇಕು ಎಂದು ಸಂತೋಷ್ ಕುತ್ತಮೊಟ್ಟೆ ಆಗ್ರಹಿಸಿದರು. ನಿಂತಿಕಲ್ಲಿನ ಗಾರ್ಬೆಲಿಂಗ್ ಕೇಂದ್ರವನ್ನು ಸ್ಥಗಿತಗೊಳಿಸಿದ ಕ್ರಮವನ್ನು ಪ್ರಸನ್ನ ಎಣ್ಮೂರು ಪ್ರಶ್ನಿಸಿದರು.

ಸದಸ್ಯ ಬೆಳೆಗಾರರ ಸಭೆಯನ್ನು ಪ್ರಾತಿನಿಧಿಕ ಸಭೆಯನ್ನಾಗಿ ಪರಿವರ್ತಿಸಬೇಕು, ಆಡಳಿತ ಮಂಡಳಿಯನ್ನು ಪಾರದರ್ಶಕವಾಗಿ ರಚನೆ ಮಾಡಬೇಕು ಎಂದು ರಾಧಾಕೃಷ್ಣ ಕೋಟೆ ಆಗ್ರಹಿಸಿದರು. ಹಳೆ ಸದಸ್ಯರಿಗೆ ಬೋನಸ್ ಶೇರ್ ನೀಡುವ ಕ್ರಮ ಕಾರ್ಪೋರೇಟ್ ಸಂಸ್ಥೆಗಳಲ್ಲಿದ್ದು, ಕ್ಯಾಂಪ್ಕೊದಲ್ಲೂ ಅಳವಡಿಸಬೇಕು ಎಂದವರು ಒತ್ತಾಯಿಸಿದರು. ಅಡಮಾನ ಸಾಲ, ವಿದ್ಯಾಭ್ಯಾಸ ಸಾಲವನ್ನು ಕ್ಯಾಂಪ್ಕೊ ನೀಡಬೇಕು ಎಂದು ಶ್ರೀಪತಿ ಭಟ್ ಹೇಳಿದರು. ಸುಳ್ಯ ಶಾಖೆಗೆ ನೋಟು ಕೌಂಟಿಂಗ್ ಮೆಶಿನ್ ಹಾಕಬೇಕು ಎಂದು ಬೆಟ್ಟ ರಾಮ ಭಟ್ ಸಲಹೆ ನೀಡಿದರು. ಎಸ್‌ಕೆಎಸಿಎಂಎಸ್‌ನನ್ನು ಉಳಿಸಬೇಕು, ಅದಕ್ಕೆ ಡಿಸಿಸಿ ಬ್ಯಾಂಕ್ ಹಾಗೂ ಕ್ಯಾಂಪ್ಕೊ ಮುಂದೆ ಬರಬೇಕು ಎಂದು ಕಳಂಜ ವಿಶ್ವನಾಥ ರೈ ಸಲಹೆ ನೀಡಿದರು.

ಅಡಿಕೆ ಧಾರಣೆ ಕುಸಿದ ಸಂದರ್ಭದಲ್ಲಿ ಬೆಂಬಲ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಕ್ಯಾಂಪ್ಕೊ ಒತ್ತಡ ಹೇರುವ ಕೆಲಸ ಮಾಡಲಿದೆ. ನಿಂತಿಕಲ್ಲಿನ ಗಾರ್ಬೆಲಿಂಗ್ ಕೇಂದ್ರದಿಂದ ತಿಂಗಳಿಗೆ ಕನಿಷ್ಠ 15 ಲೋಡು ಸಾಗಾಟ ಆದರೆ ಮಾತ್ರ ಅದರ ನಿರ್ವಹಣೆ ಸಾಧ್ಯ. ಆದರೆ ಅಲ್ಲಿ ಸಾಕಷ್ಟು ಪ್ರಯತ್ನ ಮಾಡಿಯೂ ಕೇವಲ 5 ಲೋಡು ಮಾತ್ರ ಸಾಗಾಟ ಸಾಧ್ಯವಾಗಿತ್ತು. ಅನಿವಾರ್ಯವಾಗಿ ಅದನ್ನು ಸ್ಥಗಿತ ಮಾಡಲಾಯಿತು. ಇದರಿಂದ ಸದಸ್ಯರಿಗೆ ಹಾಗೂ ನೌಕರರಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಅಧ್ಯಕ್ಷರು ಉತ್ತರಿಸಿದರು. ಈ ಕುರಿತು ವ್ಯಾಪಕ ಚರ್ಚೆ ನಡೆಯಿತು.

ಕಳೆದ ಎರಡು ವರ್ಷದಿಂದ ಕೊಕ್ಕೋ ಒಣ ಬೀಜ ಧಾರಣೆ 205ರಿಂದ 207ರವರೆಗೆ ಸ್ಥಿರವಾಗಿದೆ. ಬೇಸಿಗೆಯಲ್ಲಿ ಹಸಿ ಬೀಜ ಸಂಸ್ಕರಣೆ ಮಾಡುವಾಗ ಕ್ವಿಂಟಾಲ್‌ಗೆ 35 ಕೆಜಿ ಬಂದರೆ ಮಳೆಗಾಲದಲ್ಲಿ ಅದು 22 ಕೆಜಿ ಮಾತ್ರ ಬರುತ್ತದೆ. ಅನಿವಾರ್ಯವಾಗಿ ಮಳೆಗಾಲದಲ್ಲಿ ಹಸಿ ಬೀಜದ ಧಾರಣೆ ಕುಸಿತವಾಗುತ್ತದೆ ಎಂದು ಸುರೇಶ್ ಭಂಡಾರಿ ಹೇಳಿದರು. ವರ್ಷದ ಒಳಗೆ ನಿಂತಿಕಲ್ಲಿನ ಸೈಟ್‌ನಲ್ಲಿ ಗಾರ್ಬೆಲಿಂಗ್ ಕೇಂದ್ರವನ್ನು ಪುನರಾರಂಭಿಸಲಾಗುವುದು ಎಂದವರು ಭರವಸೆ ನೀಡಿದರು.

ಸಂಸ್ಥೆಯ ಚೀಫ್ ಮ್ಯಾನೇಜರ್ ಕೆ.ಎಂ.ಲೋಕೇಶ್, ರೀಜನಲ್ ಮ್ಯಾನೇಜರ್ ಪ್ರೇಮಾನಂದ ಶೆಟ್ಟಿಗಾರ್, ಬ್ರಾಂಚ್ ಮ್ಯಾನೇಜರ್ ಸಂತೋಷ್ ಉಪಸ್ಥಿತರಿದ್ದರು. ಶಂಕರನಾರಾಯಣ ಭಟ್ ಸ್ವಾಗತಿಸಿ, ಕೃಷ್ಣಪ್ರಸಾದ್ ಮಡ್ತಿಲ ವಂದಿಸಿದರು. ಟಿ.ಎಸ್.ಭಟ್ ಕಾರ್ಯಕ್ರಮ ನಿರೂಪಿಸಿದರು.

ಕ್ಯಾಂಪ್ಕೊದಿಂದ ಅಡಿಕೆ, ಕೊಕ್ಕೋಗೆ ಆರ್ಗನೈಸಿಂಗ್ ಮಾರ್ಕೆಟ್: ಸತೀಶ್ಚಂದ್ರ

ಜಿಎಸ್‌ಟಿಯಿಂದ ಕ್ಯಾಂಪ್ಕೊ ಹಾಗೂ ಬೆಳೆಗಾರರಿಗೆ ಅನುಕೂಲವಾಗಲಿದೆ. ಅಡಿಕೆ, ಕೊಕ್ಕೋಗೆ ಆರ್ಗನೈಸಿಂಗ್ ಮಾರ್ಕೆಟ್ ಬಂದಿದ್ದರೆ ಅದರ ಯಶಸ್ಸು ಕ್ಯಾಂಪ್ಕೊಗೆ ಸಲ್ಲಬೇಕು ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.

ಸುಳ್ಯದಲ್ಲಿ ನಡೆದ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಕ್ವಾಲಿಟಿ ಎಂದರೆ ಕ್ಯಾಂಪ್ಕೊ, ಕ್ಯಾಂಪ್ರೋ ಅಂದರೆ ಕ್ವಾಲಿಟಿ ಎಂಬ ಮಾತು ಜನಜನಿತವಾಗಿದೆ. ಕ್ಯಾಂಪ್ಕೊ ಫ್ಯಾಕ್ಟರಿಯ ಕೊಕ್ಕೋ ಪೌಡರ್‌ನಿಂದ ತಯಾರಿಸಿದ ಐಸ್‌ಕ್ರೀಂ ಕಂಪೆನಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಇದೂ ಕ್ಯಾಂಪ್ಕೊಗೂ ಹೆಮ್ಮೆ ಎಂದರು. ಅಡಿಕೆ, ಕೊಕ್ಕೊದೊಂದಿಗೆ ಆರಂಭವಾದ ಕ್ಯಾಂಪ್ಕೊ ಮುಂದಿನ ದಿನಗಳಲ್ಲಿ ಕಾಳುಮೆಣಸು, ರಬ್ಬರ್, ತೆಂಗು ಖರೀದಿಸುವ ಕುರಿತು ಚಿಂತನೆಗಳು ನಡೆದಿವೆ. ಅಡಿಕೆ ವ್ಯವಹಾರದಲ್ಲಿ ಶೇ.10ರಷ್ಟು ಪಾಲು ಪಡೆದಿರುವ ಕ್ಯಾಂಪ್ಕೊ ಶೇ.100ರಷ್ಟು ತೆರಿಗೆ ಪಾವತಿಸುತ್ತಿದೆ. ನಮ್ಮ ಉತ್ಪನ್ನಗಳನ್ನು ಸಹಕಾರಿ ಕ್ಷೇತ್ರದ ಮೂಲಕ ಮಾರಾಟ ಮಾಡಿದರೆ ಅದು ಮಹಾತ್ಮಾ ಗಾಂಧಿ, ಕುರಿಯನ್ ವರ್ಗೀಸ್ ಅವರಿಗೆ ನೀಡುವ ಗೌರವ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News