ಬ್ರಿಟಿಷರ ವಿಭಜಿಸಿ ಆಳುವ ನೀತಿಯ ಮುಂದುವರಿಕೆಯಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ: ಟಿ.ಆರಿಫ್ ಅಲಿ

Update: 2016-08-30 14:09 GMT

ಮಂಗಳೂರು, ಆ.30: ದೇಶದಲ್ಲಿ ಬ್ರಿಟೀಷರ ವಿಭಜಿಸಿ ಆಳುವ ನೀತಿಯ ಮುಂದುವರಿಕೆಯಿಂದ ಅಸಹಿಷ್ಣುತೆ ವಾತಾವರಣ ಹೆಚ್ಚುತ್ತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಟಿ.ಆರಿಫ್ ಅಲಿ ತಿಳಿಸಿದ್ದಾರೆ.

ಅವರು ಇಂದು ನಗರದ ಪುರಭವನದಲ್ಲಿ ‘ಶಾಂತಿ ಮತ್ತು ಮನವೀಯತೆ’ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ವಿಚಾರಗೋಷ್ಠಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದದ ನಡುವೆ ಮುಸ್ಲಿಮರನ್ನು ಮತ್ತು ದಲಿತರನ್ನು ವಿರೋಧಿಸುವುದೇ ರಾಷ್ಟ್ರಪ್ರೇಮವೆಂದು ಬಿಂಬಿಸಲಾಗುತ್ತಿದೆ.ಇದರಿಂದ ದೇಶದಲ್ಲಿ ಜಾತಿ,ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗುತ್ತಿವೆ. ಬಹುಸಂಸ್ಕೃತಿ, ಬಹು ಧರ್ಮ, ಜಾತಿ, ಜನಾಂಗವನ್ನು ಹೊಂದಿರುವ ದೇಶದಲ್ಲಿ ಮಾನವೀಯತೆ ಹೊಂದಿರುವ, ಜನರ ಕಷ್ಟಕ್ಕೆ ಸ್ಪಂದಿಸುವ ಜನರೂ ಇದ್ದಾರೆ. ಅದೇ ರೀತಿ ಕೋಮುವಾದ ಬೆಳೆದು ಬಂದಿರುವುದಕ್ಕೂ ಒಂದು ಇತಿಹಾಸವಿದೆ. ಭಾರತದಲ್ಲಿ ಬ್ರಿಟಿಷರು ನಮ್ಮನ್ನು ಒಡೆದು ಆಳಿದ ನೀತಿ ಸ್ವಾತಂತ್ರನಂತರವೂ ಭಾರತದಲ್ಲಿ ಮುಂದುವರಿದುಕೊಂಡು ಬಂದಿರುವುದು ಈ ದೇಶದ ಶಾಂತಿ ಸೌರ್ಹಾದತೆಗೆ ಧಕ್ಕೆಯನ್ನುಂಟು ಮಾಡಿದೆ. ರಾಜಕೀಯ ಕ್ಷೇತ್ರದಲ್ಲಿರುವ ನಮ್ಮ ಮುಖಂಡರು ಪ್ರಚೋದನಕಾರಿ ಭಾಷಣಗಳ ಮೂಲಕ ದ್ವೇಷದ ವಾತಾವರಣವನ್ನು ಸೃಷ್ಟಿಸಿದರೆ, ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಅದರ ವಿಸ್ತರಣೆಗೆ ಹಾದಿ ಮಾಡಿ ಕೊಡಲಾಗುತ್ತಿದೆ ಎಂದು ಆರಿಫ್ ಅಲಿ ತಿಳಿಸಿದರು.

ಸಂವಿಧಾನದಲ್ಲಿ ಈ ದೇಶದ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಆಚರಿಸುವ, ಆಹಾರವನ್ನು ಸ್ವೀಕರಿಸುವ, ಉಡುಗೆಗಳನ್ನು ತೊಟ್ಟುಕೊಳ್ಳುವ ಸ್ವಾತಂತ್ರವನ್ನು ನೀಡಿದ್ದರೂ ಪ್ರಸಕ್ತ ಕಾಲಘಟ್ಟದಲ್ಲಿ ಈ ಸ್ವಾತಂತ್ರವನ್ನು ಚಲಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸನ್ನಿವೇಶಗಳ ನಡುವೆಯೂ ಬಹುಸಂಖ್ಯಾತ ಜನರು ಶಾಂತಿ ಸೌರ್ಹಾದತೆಯನ್ನು ಬಯಸುವವರಿದ್ದಾರೆ. ಜನರು ದುಷ್ಕೃತ್ಯಗಳನ್ನು ನೋಡಿ ಸುಮ್ಮನಿರಬಾರದು. ಅದರ ವಿರುದ್ಧ ದೇಶದಲ್ಲಿ ಶಾಂತಿ ಸದ್ಭಾವನೆ ನೆಲೆಸಲು ಒಂದಾಗಬೇಕಾಗಿದೆ. ಆ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಎಂದು ಆರಿಫ್ ಅಲಿ ತಿಳಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ದೇಶದಲ್ಲಿ ಕೆಡುಕಿನ ನಿರ್ಮೂಲನೆ ಮಾಡಿ, ಒಳಿತಿನ ಸ್ಥಾಪನೆಗಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಾ ಇದೆ ಎಂದು ಅರಿಫ್ ಅಲಿ ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾನವ ಹಕ್ಕು ಹೋರಾಟಗಾರ ಬಿ.ಟಿ.ವೆಂಕಟೇಶ್ ಮಾತನಾಡಿ, ಪ್ರಪಂಚದ ವಿವಿಧ ದೇಶಗಳಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಒರೆಗೆ ಹಚ್ಚುವ ಘಟನೆಗಳು ನಡೆಯುತ್ತಲೆ ಇವೆ. ಶಾಂತಿಗಾಗಿ ಜನ ಹೋರಾಟ ಮಾಡುತ್ತಾ ಬಂದ ಚರಿತ್ರೆ ಇದೆ.ಎಲ್ಲರಿಗೂ ಬದುಕಲು ಬಿಡಬೇಕೆಂಬ ಬದ್ಧತೆ ಸಾರ್ವಕಾಲಿಕವಾಗಿ ನಮ್ಮ ನಡುವೆ ಇರಬೇಕಾಗಿದೆ. ತಾರತಮ್ಯ ನೀತಿ ಬದುಕಿನ ನೀತಿಯಾದಾಗ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಸಮಾನತೆ ನಮ್ಮ ಆಚರಣೆಯಾದಾಗ ಆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಾಗ ಶಾಂತಿ ಮತ್ತು ಮಾನವೀಯತೆ ನಮ್ಮ ನಡುವೆ ನೆಲೆಸಲು ಸಾಧ್ಯ ಎಂದು  ತಿಳಿಸಿದರು.

ಸಮಾರಂಭದಲ್ಲಿ ಮಂಗಳೂರು ಡಯಾಸಿಸ್ ಪರಿಷತ್‌ನ ಕಾರ್ಯದರ್ಶಿ ಎಂ.ಪಿ.ನೊರೋನ್ಹಾ ಮಾತನಾಡುತ್ತಾ, ಪರಸ್ಪರ ಧಾರ್ಮಿಕ ನಂಬಿಕೆಗಳ ಬಗ್ಗೆ ಗೌರವ ಭಾವನೆ ಮುಖ್ಯ. ಇನ್ನೊಂದು ಧರ್ಮಕ್ಕೆ ಅಪಮಾನ ಎಸಗುವ ಕೃತ್ಯ ಸಲ್ಲದು ಎಂದರು.

ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ಸತ್ಯನಾರಾಯಣ ಮಲ್ಲಿಪಟ್ಣ , ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ , ಜಿಲ್ಲಾ ಸ್ವಾಗತಿ ಸಮಿತಿಯ ಉಪಾಧ್ಯಕ್ಷರಾದ ಸಂಜೀವ ಪೂಜಾರಿ, ವಾಸುದೇವ ಬಂಗೇರ, ಹಾಜಿ ಮುಸ್ತಾಫ ಕೆಂಪಿ, ಕಾರ್ಯದರ್ಶಿಗಳಾದ ವಾಸುದೇವ ಬೆಳ್ಳೆ, ಉಮ್ಮರ್ ಯು.ಎಚ್., ಹಾಗೂ ಇತರ ಸದಸ್ಯರಾದ ಅಶ್ರಫ್,ಇಲ್ಯಾಸ್ ಇಸ್ಮಾಯಿಲ್,ಅಬ್ದುಸ್ಸಲಾಮ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ಜಮಾತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞ ಸ್ವಾಗತಿಸಿದರು. ಮುಹಮ್ಮದ್ ಮುಬೀನ್, ಅಸಿಫ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಕಾಟಿಪಳ್ಳ ಬಳಗದವರು ಶಾಂತಿ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News