ವಿಶ್ವದ ಪ್ರಪ್ರಥಮ ಮಾನವ ತಲೆ ಕಸಿಗೆ ಸರ್ಜನ್ ಗಳು ಸಜ್ಜು. ಇದಕ್ಕೆ ತಲೆ ಕೊಡುವವರು ಸಿದ್ಧವಾಗಿದ್ದಾರೆ !

Update: 2016-08-30 14:41 GMT

ವಾಶಿಂಗ್ಟನ್, ಆ. 30: ಮಾನವ ದೇಹದ ಹೆಚ್ಚಿನ ಭಾಗಗಳನ್ನು ಯಶಸ್ವಿಯಾಗಿ ಕಸಿ ಮಾಡುವಲ್ಲಿ ಆಧುನಿಕ ವೈದ್ಯ ಲೋಕ ಯಶಸ್ವಿಯಾಗಿದೆ. ಹೃದಯ, ಮೂತ್ರಪಿಂಡ ಮುಂತಾದ ಸೂಕ್ಷ್ಮ ಅಂಗಗಳ ಕಸಿ ಈಗ ಸಾಮಾನ್ಯವಾಗಿದೆ.
ಆದರೆ, ಒಂದು ಕಸಿ ಮಾತ್ರ ಈಗಲೂ ವೈದ್ಯ ಲೋಕದ ಪಾಲಿಗೆ ಸವಾಲಾಗಿಯೇ ಉಳಿದಿದೆ. ಅದು ರುಂಡ ಕಸಿ. ಮುಂಡದಿಂದ ರುಂಡ ಬೇರ್ಪಡಿಸಿ ಇನ್ನೊಬ್ಬರ ರುಂಡವನ್ನು ಅಳವಡಿಸುವುದು!
ಈಗ ಈ ನಿಟ್ಟಿನಲ್ಲೂ ಪ್ರಯೋಗಗಳು ನಡೆದಿವೆ. ರುಂಡ ಕಸಿ ಮಾಡಲು ಇಬ್ಬರು ವೈದ್ಯರು ಸಿದ್ಧತೆಗಳನ್ನು ನಡೆಸಿದ್ದಾರೆ ಹಾಗೂ ಈ ಪ್ರಯೋಗಕ್ಕೆ ತಲೆಯೊಡ್ಡಲು ಓರ್ವ ಸ್ವಯಂಸೇವಕರೂ ಸಿಕ್ಕಿದ್ದಾರೆ.
55 ವರ್ಷದ ಚೀನಾ ಸರ್ಜನ್ ಕ್ಸಿಯಾವೊಪಿಂಗ್ ರೆನ್ ಈ ಹಿಂದೆ ಮೊದಲ ಯಶಸ್ವಿ ಕೈ ಕಸಿ ನಡೆಸಿದ ತಂಡದಲ್ಲಿದ್ದವರು. ಹಂದಿಯ ಮುಂಗಾಲುಗಳನ್ನು ಅದಲು ಬದಲು ಮಾಡುವ ಮೂಲಕ ಅವರು ಆ ಶಸ್ತ್ರಚಿಕಿತ್ಸೆಗೆ ತಯಾರಾಗಿದ್ದರು.
ಇನ್ನೋರ್ವ ವೈದ್ಯ 51 ವರ್ಷದ ಇಟಲಿಯ ನರ ಸರ್ಜನ್ ಸರ್ಗಿಯೊ ಕ್ಯಾನವರೊ ಡಝನ್‌ಗಟ್ಟಳೆ ವೈಜ್ಞಾನಿಕ ಪ್ರಬಂಧಗಳನ್ನು ಬರೆದವರು.
ಇವರಿಗೆ ತನ್ನ ತಲೆಯನ್ನು ಒಪ್ಪಿಸಲು ಸಿದ್ಧರಾಗಿರುವವರು ರಶ್ಯದ 31 ವರ್ಷದ ಟೆಕ್ಕಿ ವಲೇರಿ ಸ್ಪಿರಿಡೊನೊವ್. ‘ವರ್ಡ್‌ನಿಗ್-ಹಾಫ್‌ಮನ್’ ಎಂಬ ವ್ಯತ್ಯಸ್ತ ವಂಶವಾಹಿ ಕಾಯಿಲೆಯಿಂದ ಬಳಲುತ್ತಿರುವ ಅವರು ಗಾಲಿಕುರ್ಚಿಗೆ ಸೀಮಿತರಾಗಿದ್ದಾರೆ. ಸ್ವತಃ ಊಟ ಮಾಡುತ್ತಾರೆ, ತನ್ನ ಗಾಲಿಕುರ್ಚಿಯನ್ನು ಜಾಯ್‌ಸ್ಟಿಕ್ ಮೂಲಕ ಮುನ್ನಡೆಸುತ್ತಾರೆ ಹಾಗೂ ಟೈಪ್ ಮಾಡುತ್ತಾರೆ. ಇದಕ್ಕಿಂತ ಹೆಚ್ಚಿನದನ್ನು ಮಾಡಲು ಅವರು ಅಸಮರ್ಥರು.
ಮನುಷ್ಯನ ಸ್ನಾಯುಗಳು ಮತ್ತು ಮೋಟರ್ ನ್ಯೂರಾನ್‌ಗಳನ್ನು ನಾಶಪಡಿಸುವ ಕಾಯಿಲೆಯಿಂದ ಬಳಲುತ್ತಿರುವ ಅವರು ವೈದ್ಯರ ಪ್ರಕಾರ ಈಗಾಗಲೇ ಸಾಯಬೇಕಾಗಿತ್ತು!
ಸ್ಯಾಮ್ ಕೀನ್ ಬರೆದ ಈ ಲೇಖನ ‘ಅಟ್ಲಾಂಟಿಕ್ ಮ್ಯಾಗಝಿನ್’ನಲ್ಲಿ ಪ್ರಕಟಗೊಂಡಿದೆ.
2017ರಲ್ಲೇ ಈ ಕಸಿ ನಡೆಯಬಹುದಾಗಿದೆ ಎಂದು ಇಟಲಿ ವೈದ್ಯ ಕ್ಯಾನವರೊ ಹೇಳುತ್ತಾರೆ. ಈ ಕಸಿ ಯಶಸ್ವಿಯಾಗುವ ಸಾಧ್ಯತೆ ‘‘90 ಶೇಕಡಕ್ಕಿಂತಲೂ ಅಧಿಕ’’.
 ಈ ಯೋಜನೆ ಕಾರ್ಯಗತಗೊಂಡರೆ, 80 ಸರ್ಜನ್‌ಗಳು ಬೇಕಾಗುತ್ತಾರೆ ಹಾಗೂ ಕೋಟ್ಯಂತರ ಡಾಲರ್ ವೆಚ್ಚ ತಗಲುತ್ತದೆ.

ಕೊಲೆ ಮೊಕದ್ದಮೆ ದಾಖಲಿಸಿ!
ಆದರೆ, ಇದು ತಪ್ಪು ಭರವಸೆಯನ್ನು ಹುಟ್ಟಿಸುವ ‘ಪ್ರಯೋಜನರಹಿತ ವಿಜ್ಞಾನ’ ಎಂಬುದಾಗಿ ಹಲವು ವಿಜ್ಞಾನಿಗಳು ಮತ್ತು ನೈತಿಕವಾದಿಗಳು ಹೇಳುತ್ತಾರೆ. ಒಂದು ವೇಳೆ ಸ್ಪಿರಿಡೊನೊವ್ ಮೃತಪಟ್ಟರೆ (ಆ ಸಾಧ್ಯತೆ ಇದೆ) ವೈದ್ಯರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು ಎಂದು ಅವರು ವಾದಿಸುತ್ತಾರೆ.

ಬದುಕುವುದು ಯಾರು?
ಸ್ಪಿರಿಡೊನೊವ್‌ರ ಬೇರ್ಪಡಿಸಿದ ತಲೆಯ ಸ್ನಾಯುಗಳು ಮತ್ತು ಮೆದುಳು ಸತ್ತ ದಾನಿ ದೇಹದ ಸ್ನಾಯುಗಳಿಗೆ ವೈದ್ಯರು ಕಲರ್ ಕೋಡ್ ಲಗತ್ತಿಸುತ್ತಾರೆ. ಇದರಿಂದ ಮರು ಜೋಡಣೆ ಸುಲಭವಾಗುತ್ತದೆ. ಪಾರದರ್ಶಕ ವಜ್ರದ ಬ್ಲೇಡ್‌ನಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಶಸ್ತ್ರಕ್ರಿಯೆ ಬಹುಶಃ ಚೀನಾದಲ್ಲಿ ನಡೆಯುತ್ತದೆ. ಯಾಕೆಂದರೆ, ಅಮೆರಿಕ ಅಥವಾ ಯುರೋಪ್‌ನಲ್ಲಿ ಇದಕ್ಕೆ ಅನುಮತಿ ಸಿಗುವ ಸಾಧ್ಯತೆ ವಿರಳ.
ಈ ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಪ್ರಶ್ನೆಯೊಂದು ಉಳಿದು ಬಿಡುತ್ತದೆ: ಇದರಲ್ಲಿ ಬದುಕುಳಿದವರು ಯಾರು? ಸ್ಪಿರಿಡೊನೊವ್? ಅಥವಾ ದೇಹ ದಾನಿ? ಅಥವ ಇಬ್ಬರ ಮಿಶ್ರಣವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News