ಒಡೆಯ ಹೇಳುವುದನ್ನು ನಾಯಿಗಳು ಅರ್ಥ ಮಾಡಿಕೊಳ್ಳುತ್ತವೆ : ಅಧ್ಯಯನ ವರದಿ

Update: 2016-08-30 14:44 GMT

ಬರ್ಲಿನ್, ಆ. 30: ಹೆಚ್ಚಿನ ನಾಯಿಗಳ ಯಜಮಾನರು ತುಂಬಾ ಹಿಂದೆಯೇ ನಂಬಿರುವುದನ್ನು ಸಮರ್ಥಿಸುವ ಪುರಾವೆಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ: ಮನುಷ್ಯನ ಉತ್ತಮ ಸ್ನೇಹಿತ ನಾಯಿ ನಾವು ಏನು ಹೇಳುತ್ತೇವೆಯೋ ಅದರಲ್ಲಿ ಕೆಲವು ಭಾಗಗಳನ್ನು ಅರ್ಥ ಮಾಡಿಕೊಳ್ಳುತ್ತವೆ.
 ತರಬೇತಿದಾರನು ಹೇಳುವ ಮಾತುಗಳನ್ನು ಕೇಳುತ್ತಿರುವ ನಾಯಿಗಳ ಮೆದುಳುಗಳನ್ನು ಹಂಗೇರಿಯ ಸಂಶೋಧಕರು ಸ್ಕಾನ್ ಮಾಡಿದ್ದಾರೆ. ಮಾತುಗಳನ್ನು ಕೇಳಲು ನಾಯಿಗಳು ತಮ್ಮ ಮೆದುಳಿನ ಯಾವ ಭಾಗವನ್ನು ಬಳಸಿಕೊಳ್ಳುತ್ತವೆ ಎನ್ನುವುದನ್ನು ತಿಳಿಯಲು ಅವರು ಈ ಪ್ರಯೋಗ ಮಾಡಿದರು.
ಮಾನವರಂತೆಯೇ, ನಾಯಿಗಳ ಮೆದುಳಿನ ಎಡ ಭಾಗದಲ್ಲಿ ಪದಗಳ ಹಾಗೂ ಬಲ ಭಾಗದಲ್ಲಿ ಧ್ವನಿಗಳ ವಿಶ್ಲೇಷಣೆ ನಡೆಯುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು.
ಪದಗಳು ಮತ್ತು ಧ್ವನಿಗಳು ಎರಡೂ ಸಕಾರಾತ್ಮಕವಾಗಿದ್ದರೆ ತಮ್ಮನ್ನು ಶ್ಲಾಘಿಸಲಾಗುತ್ತಿದೆ ಎಂಬುದಾಗಿ ಅವುಗಳು ಅರ್ಥ ಮಾಡಿಕೊಳ್ಳುತ್ತವೆ. ಆದರೆ, ಪ್ರೋತ್ಸಾಹದಾಯಕ ಧ್ವನಿಯಲ್ಲಿ ಅರ್ಥವಿಲ್ಲದ ಪದಗಳನ್ನು ಹೇಳಿದರೆ ಅಥವಾ ನೀರಸ ಧ್ವನಿಯಲ್ಲಿ ಅರ್ಥಪೂರ್ಣ ಪದಗಳನ್ನು ಹೇಳಿದರೆ ಅವುಗಳು ಉಪೇಕ್ಷಿಸುತ್ತವೆ.
‘‘ನಾವು ಏನು ಹೇಳುತ್ತೇವೆ ಮತ್ತು ಅದನ್ನು ಹೇಗೆ ಹೇಳುತ್ತೇವೆ- ಎರಡನ್ನೂ ನಾಯಿಗಳ ಮೆದುಳು ಗಣನೆಗೆ ತೆಗೆದುಕೊಳ್ಳುತ್ತವೆ’’ ಎಂದು ಸಂಶೋಧನಾ ತಂಡದ ನಾಯಕ, ಬುಡಾಪೆಸ್ಟ್‌ನ ಓಟ್ವೋಸ್ ಲೊರಾಂಡ್ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಆ್ಯಟಿಲ ಆ್ಯಂಡಿಕ್ಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News