‘ನಮಗೂ ಬದುಕುವ ಹಕ್ಕಿದೆ, ದುಡಿದು ತಿನ್ನುವ ಕನಸಿದೆ’: ಪರಿವರ್ತನೆಯ ಹಾದಿಯಲ್ಲಿರುವ ಮಂಗಳಮುಖಿಯರ ನೋವಿದು

Update: 2016-08-30 18:41 GMT

ಮಂಗಳೂರು, ಆ.30: ‘‘ನಾನು ಪಿಯುಸಿ ಓದಿದ್ದೇನೆ. ಭಿಕ್ಷಾಟನೆಗೆ ಸ್ವಾಭಿಮಾನ ಅಡ್ಡಬರುತ್ತೆ. ಮೈಯೊಡ್ಡಲು ಮನಸ್ಸು ಅಂಜುತ್ತೆ. ಆದರೆ ದುಡಿಯುವ ಕೈಗಳಿಗೆ ಯಾರೂ ಕೆಲಸ ಕೊಡುವುದಿಲ್ಲ. ಜೀವನೋಪಾಯಕ್ಕೆ ಭಿಕ್ಷಾಟನೆಗೆ ಇಳಿದರೆ ರಾಡ್‌ನಿಂದ ಹೊಡೆಯುತ್ತಾರೆ, ದುಡಿದು ತಿನ್ನಲಾಗುವುದಿಲ್ಲವೇ ಎಂದು ಹೀಯಾಳಿಸುತ್ತಾರೆ. ಇನ್ನು ಮನೆಯಿಲ್ಲದೆ ರಾತ್ರಿ ಫುಟ್‌ಪಾತ್‌ನಲ್ಲಿ ಮಲಗಿದರೆ ಮೈಮೇಲೆ ಬೀಳುತ್ತಾರೆ. ಮತ್ತೆ ನಾವು ಬದುಕುವುದಾದರೂ ಹೇಗೆ? ನಾವು ಈ ದೇಶದ ಪ್ರಜೆಯಲ್ಲವೇ?’’ ಇದು ಸಮಾಜದಲ್ಲಿ ಗೌರವಯುತ, ಸ್ವಾಭಿಮಾನದ ಬದುಕಿಗಾಗಿ ಹಾತೊರೆಯುತ್ತಿರುವ, ಕೈಗಳಿಗೆ ಕೆಲಸ ಬೇಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಮಂಗಳಮುಖಿಯರ ಪರವಾಗಿ ಸಂಧ್ಯಾ ಎಂಬಾಕೆ ಈ ಸಮಾಜ, ಸರಕಾರದ ಮುಂದಿಟ್ಟಿರುವ ಪ್ರಶ್ನೆ.

ದ.ಕ. ಜಿಪಂನ ಸಭಾಂಗಣದಲ್ಲಿ ಪರಿವರ್ತನಾ ಟ್ರಸ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಟ್ರಸ್ಟ್‌ನ ಅಧ್ಯಕ್ಷೆ ಸಂಧ್ಯಾ ತಮ್ಮ ಸಮುದಾಯ ಅನುಭವಿಸುತ್ತಿರುವ ನೋವನ್ನು ತೆರೆದಿಟ್ಟರು. ಹೃದಯ ಹಿಂಡುವ ಮಂಗಳಮುಖಿಯರ ಜೀವನಾನುಭವ!

‘‘ನಾನು ಹುಟ್ಟಿದಾಗ ಗಂಡು ಮಗು ಎಂಬ ಕಾರಣಕ್ಕೆ ಮನೆಯಲ್ಲಿ ಸಂಭ್ರಮಿಸಿದ್ದರಂತೆ. ಆದರೆ ಶಾಲೆಗೆ ಹೋಗುತ್ತದ್ದಂತೆಯೇ ನನ್ನಲ್ಲಾದ ಬದಲಾವಣೆ ಮನೆಯವರ ಸಿಟ್ಟಿಗೆ ಕಾರಣವಾಯಿತು. ಹೆಣ್ಣಿನಂತೆ ನನ್ನ ವೇಷಭೂಷಣ, ಹಾವಭಾವ ಅಣ್ಣಂದಿರಲ್ಲಿ ಸಿಟ್ಟು ತರಿಸುತ್ತಿದ್ದರೆ, ನನ್ನ ಜೀವನ ನರಕಸದೃಶವಾಗಲು ಆರಂಭವಾಯಿತು. ಅದರ ನಡುವೆಯೇ ಪಿಯುಸಿ ಮುಗಿಸಿದೆ. ಕುಟುಂಬದ ಜೊತೆಗಿನ ನರಕಯಾತನೆ ಬೇಡವೆಂದು ನಮ್ಮವರ ಜೊತೆಗಿರಲು ಬಯಸಿ ಮನೆಯಿಂದ ಹೊರಬಂದು ಫುಟ್‌ಪಾತ್‌ನಲ್ಲಿ ದಿನ ಕಳೆದೆ. ಆದರೆ ಬಾಲ್ಯದಲ್ಲೇ ತಂದೆ ತೀರಿಹೋಗಿದ್ದರಿಂದ ತಂಗಿಯ ಮದುವೆಯ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಾಗಿತ್ತು. ಅದಕ್ಕೆ ಮತ್ತೆ ಮನೆಗೆ ಹಿಂತಿರುಗಿ ಮನೆಯವರ ಆಶಯದಂತೆ ಪ್ಯಾಂಟ್ ಶರ್ಟ್ ಹಾಕಿಕೊಂಡು ಕೆಲಸಕ್ಕೆ ಸೇರಿಕೊಂಡೆ’’.

‘ಆದರೆ ಅಲ್ಲಿಯೂ ಕಿರುಕುಳ, ಮನಚುಚ್ಚುವ ಮಾತುಗಳು. ಆದರೂ ತಂಗಿಗೆ ವಿವಾಹವಾಗುವವರೆಗೆ ಎಲ್ಲವನ್ನೂ ಸಹಿಸಿಕೊಂಡ ನಾನು ಕೊನೆಗೊಂದು ದಿನ ಕುಟುಂಬದ ಬಾಂಧವ್ಯ ತೊರೆದು ನನ್ನಂತೆ ಇರುವವರ ಸಂಗಡ ಬಯಸಿ ಮಂಗಳೂರಿಗೆ ಬಂದುಬಿಟ್ಟೆ. ಹೆಣ್ಣಾಗಿ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡೆ. ಹಲವಾರು ವರ್ಷಗಳಿಂದ ನಾನು ಮಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದೇನೆ. ಆರಂಭದಲ್ಲಿ ಮಂಗಳೂರಿನಲ್ಲಿ ಬಸ್ ನಿಲ್ದಾಣ, ಪೆಟ್ರೋಲ್ ಪಂಪ್, ಫುಟ್‌ಪಾತ್‌ಗಳಲ್ಲೇ ಮಲಗಬೇಕಾಯಿತು. ನಮ್ಮಂತವರಿಗೆ ಯಾರೂ ಬಾಡಿಗೆ ಮನೆ ಕೊಡಲು ಮುಂದೆ ಬರುವುದಿಲ್ಲ. ಮುಂದಾದರೂ ದುಪ್ಪಟ್ಟು ಬಾಡಿಗೆ ಪಡೆಯುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದರೆ ರಾತ್ರಿ ಹೊತ್ತು ರೌಡಿಗಳು ಮೈಮೇಲೆ ಬಿದ್ದು, ಸತಾಯಿಸುತ್ತಾರೆ. ಬಾಯಿಗೆ ಮೂತ್ರ ಮಾಡುತ್ತಾರೆ. ಜೀವನೋಪಾಯಕ್ಕೆ ಭಿಕ್ಷಾಟನೆಗೆ ಹೋದರೆ ರಾಡ್ ಹಿಡಿದು ಅಟ್ಟಿಸಿ ಹೊಡೆದ ಅನುಭವವನ್ನೂ ನಾನು ಅನುಭವಿಸಿದ್ದೇನೆ’’ ಎನ್ನುತ್ತಾ ಸಂಧ್ಯಾ ತೀರಾ ಭಾವುಕರಾಗುತ್ತಿದ್ದಂತೆಯೇ ಪೊಲೀಸ್ ಆಯುಕ್ತ ಚಂದ್ರಶೇಖರ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರೂ ಒಂದು ಘಳಿಗೆ ಸ್ತಬ್ಧರಾಗಿಬಿಟ್ಟರು.

ನಮಗೂ ಸಿಗಲಿ ಸರಕಾರಿ ಸೌಲಭ್ಯಗಳು

ನಮಗೂ ನಿಯತ್ತಿನಿಂದ ಎಲ್ಲರಂತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಆಸೆಯಿದೆ. ಸುಮಾರು 30 ವರ್ಷಗಳಿಂದ ನಾನು ಮಂಗಳೂರಿನಲ್ಲಿ ನೆಲೆಸಿದ್ದೇನೆ. ನನ್ನಂತೆಯೇ ಇಲ್ಲಿ ಬದುಕಿನ ಕನಸು ಕಟ್ಟಿಕೊಂಡು ಬಂದ ನನ್ನ ಸಮುದಾಯದವರಿಗೆ ಸ್ವಾಭಿಮಾನದ ಬದುಕಿನ ಜೊತೆ ಸರಕಾರಿ ಸೌಲಭ್ಯಗಳು ಸಿಗಬೇಕೆಂಬುದು ನನ್ನ ಆಶಯ ಎಂದು ಟ್ರಸ್ಟ್‌ನ ಗೌರವಾಧ್ಯಕ್ಷೆ, ಜಿಲ್ಲೆಯಲ್ಲಿರುವ ಮಂಗಳಮುಖಿಯರ ಪ್ರಮುಖರೂ ಆಗಿರುವ ರಾಣಿ ಆಶಯ ವ್ಯಕ್ತಪಡಿಸಿದರು.

ಪರಿವರ್ತನೆಯ ನಿರೀಕ್ಷೆಯಲ್ಲಿ...

ನೂತನ ಪರಿವರ್ತನಾ ಟ್ರಸ್ಟ್ ನಮ್ಮಲ್ಲಿನ ಕನಸುಗಳನ್ನು ನನಸಾಗಿಸುವ ನಿರೀಕ್ಷೆ ಇದೆ. ನಮಗೂ ಒಂದು ಗೌರವಯುತ ಬದುಕು ಇದೆ ಎಂಬ ಮನೋಭಾವ ನಮ್ಮಲ್ಲಿ ಮೂಡಿಸಿದೆ ಎನ್ನುತ್ತಾರೆ ಟ್ರಸ್ಟ್‌ನ ಕಾರ್ಯದರ್ಶಿ ಸಂಜನಾ.

ಸ್ವ ಉದ್ಯೋಗಕ್ಕಾಗಿ ಸ್ವಸಹಾಯ ಸಂಘ ರಚನೆಗೆ ಒತ್ತು

ಪ್ರಸ್ತುತ ಟ್ರಸ್ಟ್‌ನಡಿ ದ.ಕ. ಜಿಲ್ಲೆಯ 150 ಮಂದಿ ಮಂಗಳಮುಖಿಯರು ಗುರುತಿಸಿಕೊಂಡಿದ್ದಾರೆ. ಪ್ರಥಮವಾಗಿ ಟ್ರಸ್ಟ್‌ನಡಿ ಇರುವ ಎಲ್ಲಾ ಮಂಗಳಮುಖಿಯರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗುವುದು. ಜೊತೆಯಲ್ಲಿ ಸ್ವಸಹಾಯ ಸಂಘದ ರಚನೆಯ ಮೂಲಕ ಅವರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಲು ಚಿಂತಿಸಲಾಗುತ್ತಿದೆ ಎಂದು ಟ್ರಸ್ಟ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಮಾಜ ಸೇವಕಿ ನಂದಾ ಪಾಯಸ್ ಅಭಿಪ್ರಾಯಿಸಿದ್ದಾರೆ.

ಬಿಕಾಂ ಪದವೀಧರೆ ಶ್ರೀನಿಧಿ

ಟ್ರಸ್ಟ್‌ನ ಕೋಶಾಧಿಕಾರಿ ಶ್ರೀನಿಧಿ ಬಿಕಾಂ ಪದವೀಧರೆ. ಮೂಲತ: ಆಂಧ್ರ ಪ್ರದೇಶದವರಾದ ಶ್ರೀನಿಧಿ 8 ವರ್ಷಗಳಿಂದ ಮಂಗಳೂರಿನಲ್ಲಿಯೇ ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ.

ಯಾವ ಉದ್ಯೋಗ ನೀಡಿದರೂ ಮಾಡಲು ಸಿದ್ಧ
 ನಮ್ಮ ಬದುಕಿಗೊಂದು ನೆಲೆ, ನಮಗೆ ಅರ್ಹವಾಗಿ ಲಭ್ಯವಾಗಬೇಕಾದ ರೇಶನ್ ಕಾರ್ಡ್, ಗುರುತಿನ ಚೀಟಿ, ಮತದಾರರ ಚೀಟಿ ಹಾಗೂ ವಸತಿ ಸೌಲಭ್ಯ ಒದಗಿಸುವ ಜೊತೆಗೆ ಯಾವ ಉದ್ಯೋಗ ನೀಡಿದರೂ ನಾವು ಮಾಡಲು ಸಿದ್ಧ ಎಂದು ಹೇಳಿದ ರಾಣಿ, ಮಂಗಳಮುಖಿಯರನ್ನು ವಿನಾಕಾರಣ ಹಿಂಸಿಸಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು. ಬದುಕಲು ಯಾವುದೇ ದಾರಿಯಿಲ್ಲದೆ ಭಿಕ್ಷಾಟನೆ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವ ಮಂಗಳಮುಖಿಯರಿಗೆ ಕೆಲವೊಮ್ಮೆ ಪೊಲೀಸರ ತಪ್ಪು ಗ್ರಹಿಕೆಯಿಂದ ತೊಂದರೆಯಾಗುತ್ತಿದೆ. ಮಂಗಳಮುಖಿಯರ ವೇಷದಲ್ಲಿ ಹೊರಜಿಲ್ಲೆ, ಊರು ಗಳಿಂದ ಬರುವ ಗಂಡಸರು ತೀರಾ ದಬ್ಬಾಳಿಕೆಯ ಭಿಕ್ಷಾಟನೆ, ಸುಲಿಗೆಯಲ್ಲಿ ತೊಡಗುತ್ತಿರುವುದರಿಂದ ಮಂಗಳಮುಖಿಯರೆಲ್ಲರನ್ನೂ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಪ್ರಶ್ನಿಸಿ, ತುಚ್ಛವಾಗಿ ಕಾಣಲಾಗುತ್ತದೆ. ನಮ್ಮಲ್ಲಿಯೂ ಯಾರಾದರೂ ತಪ್ಪು ಮಾಡಿದರೆ ಶಿಕ್ಷೆ ನೀಡಿ. ಆದರೆ ವಿನಾಕಾರಣ ಯಾರದ್ದೋ ತಪ್ಪಿಗೆ ನಮ್ಮವರಿಗೆ ತೊಂದರೆ ಕೊಡಬೇಡಿ ಎಂದು ರಾಣಿ ಮಂಗಳ ಮುಖಿಯರ ಪರವಾಗಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News