ಪಡುಬಿದ್ರೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಡಿಸಿ

Update: 2016-08-30 18:58 GMT

ಉಡುಪಿ, ಆ.30: ಜಿಲ್ಲೆಯಲ್ಲಿ ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪಡುಬಿದ್ರೆ ಬೀಚ್‌ನಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಸೆ.27ರಂದು ನಡೆಯುವ ವಿಶ್ವ ಪ್ರವಾ ಸೋದ್ಯಮ ದಿನಾಚರಣೆ ಪ್ರಯುಕ್ತ ಪಡುಬಿದ್ರೆ ಬೀಚ್‌ನಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲೆಯ ಸಂಸ್ಕೃತಿ ಯನ್ನು ಬಿಂಬಿಸುವ ಕಾರ್ಯಕ್ರಮ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿ ಸುವಂತೆ ಹಾಗೂ ಆಳ್ವಾಸ್ ವಿದ್ಯಾರ್ಥಿ ಗಳಿಂದ ಕಾರ್ಯಕ್ರಮ ಏರ್ಪಡಿಸುವಂತೆ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹೋಮ್ ಸ್ಟೇಗಳನ್ನು ಪ್ರಾರಂಭಿಸುವ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಹಾಗೂ ಅವುಗಳ ಕುರಿತ ಅಗತ್ಯ ನಿಯಮಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿಗಳನ್ನು ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ಕೇಂದ್ರ ಸರಕಾರದ ಬೀಚ್ ಅಭಿವೃದ್ಧಿ ಅನುದಾನದಲ್ಲಿ ಜಿಲ್ಲೆಯ ಪಡುಬಿದ್ರೆ, ಕಾಪು, ತ್ರಾಸಿ, ಮಲ್ಪೆ ಮತ್ತು ಒತ್ತಿನೆಣೆ ಬೀಚ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಕೆಆರ್‌ಐಡಿಎಲ್‌ನ ಅಧಿಕಾರಿಗಳಿಗೆ ಸೂಚಿಸಿದರು. ಉಡುಪಿಯ ಕಲ್ಯಾಣಪುರ ಸಮೀಪದ ಹೊಳೆಯಲ್ಲಿ ಬೋಟ್‌ಹೌಸ್ ನಡೆಸಲು ಅನುಮತಿಗೆ ಅರ್ಜಿ ಸಲ್ಲಿಸಿರುವ ಕುರಿತು ಚರ್ಚಿಸಿದ ವೆಂಕಟೇಶ್, ಸಂಬಂಧಪಟ್ಟವರಿಗೆ ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮಲ್ಪೆಯಲ್ಲಿ ಬೀಚ್ ಕ್ಲೀನಿಂಗ್‌ಗಾಗಿ ಖರೀದಿಸಿರುವ ಯಂತ್ರವು ಸೆ.5ರೊಳಗೆ ಆಗಮಿಸಲಿದ್ದು, ಈ ಯಂತ್ರವನ್ನು ಮಲ್ಪೆ ಬೀಚ್ ಮಾತ್ರವಲ್ಲದೇ ಜಿಲ್ಲೆಯ ಎಲ್ಲ ಬೀಚ್‌ಗಳ ಸ್ವಚ್ಛತೆಗೂ ಬಳಸುವಂತೆ ಆದೇಶಿಸಿದರು. ಮಣ್ಣಪಳ್ಳದಲ್ಲಿ ಸುಸಜ್ಜಿತವಾದ ಅಕ್ವೇರಿಯಂ ಸ್ಥಾಪಿಸುವ ಕುರಿತು ವಿವರ ವಾದ ಯೋಜನಾ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಪೌರಾಯುಕ್ತ ಮಂಜುನಾಥಯ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್, ಕೆಆರ್‌ಐಡಿಎಲ್‌ನ ಕೃಷ್ಣ ಹೆಪ್ಸೂರು, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್, ಕೋಸ್ಟಲ್ ಟೂರಿಸಂನ ಮನೋಹರ ಶೆಟ್ಟಿ, ಮಲ್ಪೆಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News