ಪೋಪ್ ಸ್ಥಾನ ಬಿಡಲು ಕಾರಣ ಬಹಿರಂಗಪಡಿಸಿದ ಬೆನೆಡಿಕ್ಟ್

Update: 2016-08-31 18:48 GMT

ಲ್ಯಾಟಿನ್ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಡಿದ ಸುಸ್ತು ಮತ್ತು ಅನಾರೋಗ್ಯವೇ ಪೋಪ್ ಬೆನೆಡಿಕ್ಟ್ XVI ರಾಜೀನಾಮೆ ನೀಡುವುದು ತಮ್ಮ ಕರ್ತವ್ಯ ಎಂದು ತಿಳಿದುಕೊಳ್ಳಲು ಕಾರಣವಾಯಿತು. ಈ ವಿಚಾರವನ್ನು ಈಗ ಅವರೇ ತಮ್ಮ ಆತ್ಮಕತೆಯಲ್ಲಿ ಜಗತ್ತಿಗೆ ತಿಳಿಸಿದ್ದಾರೆ.

 500 ವರ್ಷಗಳಲ್ಲೇ ರಾಜೀನಾಮೆ ನೀಡಿ ಅಧಿಕಾರ ತ್ಯಜಿಸಿದ ಮೊದಲ ಪೋಪ್ ಆಗಿರುವ ಬೆನೆಡಿಕ್ಟ್ ತಮ್ಮ ‘ಸರ್ವೆಂಟ್ ಆಫ್ ಗಾಡ್ ಆಂಡ್ ಹ್ಯುಮಾನಿಟಿ: ದ ಬಯಾಗ್ರಫಿ ಆಫ್ ಬೆನೆಡಿಕ್ಟ್‌’ಎನ್ನುವ ಆತ್ಮಕಥನದಲ್ಲಿ ನಿವೃತ್ತರಾಗುವ ತಮ್ಮ ನಿರ್ಧಾರವನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ನಂತರ ಪೋಪ್ ಆದ ಫ್ರಾನ್ಸಿಸ್ ಅವರ ಜೊತೆಗಿನ ಸ್ನೇಹಸಂಬಂಧವನ್ನೂ ಹೇಳಿಕೊಂಡಿದ್ದಾರೆ.

2012ರಲ್ಲಿ ಮೆಕ್ಸಿಕೋ ಮತ್ತು ಕ್ಯೂಬಾಗೆ ಭೇಟಿ ನೀಡಿದಾಗ ಆರೋಗ್ಯ ಬಹಳ ಕುಸಿದಿತ್ತು. ಇಂತಹ ಸುಸ್ತಾಗುವ ಪ್ರವಾಸಗಳನ್ನು ಇನ್ನು ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದರು ಎಂದು ಬೆನೆಡಿಕ್ಟ್ ತಮ್ಮ ಆತ್ಮಕತೆ ಬರೆದ ಲೇಖಕ ಎಲಿಯೊ ಗುರೆಯರೊ ಜೊತೆ ಹೇಳಿಕೊಂಡಿದ್ದಾರೆ.

2013ರಲ್ಲಿ ವಿಶ್ವ ಯುವ ದಿನದಂದು ರಿಯೋ ಡಿ ಜನೈರೋಗೆ ಪ್ರಯಾಣ ಮಾಡುವ ಸವಾಲು ಅವರ ಮುಂದಿತ್ತು. ಆ ಸಂದರ್ಭದಲ್ಲಿ ಅವರು ವಾಸ್ತವವನ್ನು ಎದುರಿಸಲೇಬೇಕಾಗಿತ್ತು. “ವೈದ್ಯರ ಜೊತೆಗೆ ಮಾತುಕತೆ ನಡೆಸಿದ ಮೇಲೆ ವಿಶ್ವ ಯುವ ದಿನದಲ್ಲಿ ಭಾಗವಹಿಸುವುದು ನನಗೆ ಸಾಧ್ಯವಾಗುವುದಿಲ್ಲ ಎನ್ನುವುದು ತಿಳಿಯಿತು. ಇದೂ ಕೂಡ ನಾನು ಕರ್ತವ್ಯಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಕಾರಣವಾಯಿತು” ಎಂದು ಪೋಪ್ ಹೇಳಿದ್ದಾರೆ.

ಬೆನೆಡಿಕ್ಟ್ ಅವರು 2013 ಫೆಬ್ರವರಿ 11ರಂದು ಆರೋಗ್ಯ ಕಾರಣಗಳು ಮತ್ತು ಮಾನಸಿಕ ಒತ್ತಡಗಳನ್ನು ಮುಂದಿಟ್ಟು ರಾಜೀನಾಮೆಯ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. ಫೆಬ್ರವರಿ 28ರಂದು ಅವರು ಅಧಿಕಾರ ತ್ಯಜಿಸಿದರು. ಅವರ ನಂತರ ಬಂದ ಪೋಪ್ ಫ್ರಾನ್ಸಿಸ್ ಮಾರ್ಚ್ 13ರಂದು ವ್ಯಾಟಿಕನ್‌ನಲ್ಲಿ ಅಧಿಕಾರ ಸ್ವೀಕರಿಸಿದರು. ಬೆನೆಡಿಕ್ಟ್ ತಮ್ಮ ಆತ್ಮಕತೆಯಲ್ಲಿ ಫ್ರಾನ್ಸಿಸ್ ಬಗ್ಗೆಯೂ ಬರೆದಿದ್ದಾರೆ. ಅವರ ಜೊತೆಗೆ ಉತ್ತಮ ಪೋಷಕ-ಸೋದರಭಾವ ಹೊಂದಿರುವುದನ್ನು ಹೇಳಿದ್ದಾರೆ. “ನಾನು ಆಗಾಗ್ಗೆ ಸಣ್ಣ ಉಡುಗೊರೆಗಳು, ವೈಯಕ್ತಿಕವಾಗಿ ಬರೆದ ಪತ್ರಗಳನ್ನು ಪಡೆದುಕೊಳ್ಳುತ್ತೇನೆ. ದೀರ್ಘ ಪ್ರಯಾಣದ ಮೊದಲು ಫ್ರಾನ್ಸಿಸ್ ಅವರು ನನ್ನನ್ನು ಭೇಟಿಯಾಗಲು ಮರೆಯುವುದಿಲ್ಲ. ಅವರು ನನ್ನ ಕಡೆಗೆ ತೋರಿಸುವ ಮಾನವೀಯ ಕರುಣೆ ನನ್ನ ಜೀವನದ ಕೊನೆಯ ದಿನಗಳಲ್ಲಿ ಸಿಗುತ್ತಿರುವ ವಿಶೇಷ ಅನುಗ್ರಹವಾಗಿದೆ” ಎಂದು ಬೆನೆಡಿಕ್ಟ್ ಹೇಳಿದ್ದಾರೆ.

ಕೃಪೆ:www.nbcnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News