ರೊಹಿಂಗ್ಯ ಮುಸ್ಲಿಮರ ಬಗ್ಗೆ ಜಾಗತಿಕ ಕಳವಳ: ಮ್ಯಾನ್ಮಾರ್‌ಗೆ ಎಚ್ಚರಿಸಿದ ಬಾನ್ ಕಿ ಮೂನ್
ನೇಪಿಟಾವ್ (ಮ್ಯಾನ್ಮಾರ್), ಆ. 31: ಬಹುಸಂಖ್ಯಾತ ಬೌದ್ಧರ ಹಿಂಸಾಚಾರಕ್ಕೆ ಗುರಿಯಾಗಿ ರಖೈನ್ ರಾಜ್ಯದ ಉತ್ತರ ಭಾಗದಲ್ಲಿರುವ ಶಿಬಿರಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿರುವ ಲಕ್ಷಾಂತರ ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರ ಬಗ್ಗೆ ಜಗತ್ತು ಭಾರೀ ಕಳವಳಗೊಂಡಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಮ್ಯಾನ್ಮಾರ್ ಸರಕಾರಕ್ಕೆ ಹೇಳಿದ್ದಾರೆ.
‘‘ಅವರಿಗೆ ಭರವಸೆ ಬೇಕು’’ ಎಂದು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಜೊತೆ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾನ್ ಹೇಳಿದರು.
‘‘ಮ್ಯಾನ್ಮಾರ್‌ನ ಎಲ್ಲ ಜನಾಂಗ ಮತ್ತು ಹಿನ್ನೆಲೆಗಳ ಜನರು ತಮ್ಮ ನೆರೆಯವರೊಂದಿಗೆ ಸಮಾನತೆ ಮತ್ತು ಸೌಹಾರ್ದತೆಯೊಂದಿಗೆ ಬಾಳಲು ಸಾಧ್ಯವಾಗಬೇಕು’’ ಎಂದರು.
ದೇಶದ ಹಲವಾರು ಸಶಸ್ತ್ರ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಮತ್ತು ಸರಕಾರದ ನಡುವೆ ಅರ್ಧ ಶತಮಾನದಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸುವುದಕ್ಕಾಗಿ ಬಾನ್ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದಾರೆ.
ಮಾತುಕತೆಗಳು ರಾಜಧಾನಿ ನೇಪಿಟಾವ್‌ನಲ್ಲಿ ಬುಧವಾರ ಆರಂಭಗೊಳ್ಳುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಸುಮಾರು 2,000 ಪ್ರತಿನಿಧಿಗಳು ಮತ್ತು ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
‘‘ಮಾತುಕತೆಯಲ್ಲಿ ಎಲ್ಲ ಗುಂಪುಗಳು ಭಾಗವಹಿಸುವಂತಾಗಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ. ಆದರೆ, ಭಾಗವಹಿಸುವುದು, ಬಿಡುವುದು ಅವರಿಗೆ ಬಿಟ್ಟದ್ದು’’ ಎಂದು ವಿದೇಶ ಸಚಿವೆಯೂ ಆಗಿರುವ ಸರಕಾರದ ಸಲಹಾಕಾರ್ತಿ ಸೂ ಕಿ ಹೇಳಿದರು.
ಸೂ ಕಿಯ ನಾಯಕತ್ವದಲ್ಲಿ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವ ‘‘ಭಾರೀ ನಿರೀಕ್ಷೆ’’ಯನ್ನು ಜಗತ್ತು ಹೊಂದಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ನುಡಿದರು.
ದೇಶವು ಸೇನಾ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ತೆಕ್ಕೆಗೆ ಹೊರಳಿದ ಅಸಾಮಾನ್ಯ ನಡೆಯನ್ನು ಅವರು ಶ್ಲಾಘಿಸಿದರು. ಆದರೆ, ರೊಹಿಂಗ್ಯ ಮುಸ್ಲಿಮರ ಬವಣೆ ಸೇರಿದಂತೆ ಮ್ಯಾನ್ಮಾರ್ ಎದುರಿಸುತ್ತಿರುವ ಹಲವಾರು ಸವಾಲುಗಳ ಬಗ್ಗೆ ಎಚ್ಚರಿಸಿದರು.