ಡಿಸಿ ಮನ್ನಾ ಭೂಮಿಯಲ್ಲಿ ಮೇಲ್ವರ್ಗದವರಿಗೆ ಹಕ್ಕುಪತ್ರ!

Update: 2016-08-31 14:33 GMT

ಮಂಗಳೂರು, ಆ.31: ಜಿಲ್ಲೆಯಾದ್ಯಂತ ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗಿರುವ ಬಗ್ಗೆ ಆರೋಪಗಳು ದಲಿತ ವರ್ಗದಿಂದ ವ್ಯಕ್ತವಾಗುತ್ತಿರುವಂತೆಯೇ, ಬೆಳ್ತಂಗಡಿಯ ಶಿಬಾಜೆಯಲ್ಲಿ 85.94 ಎಕರೆ ಡಿಸಿ ಮನ್ನಾ ಭೂಮಿ ಮೇಲ್ವರ್ಗದವರಿಂದ ಅತಿಕ್ರಮಣವಾಗಿರುವುದಲ್ಲದೆ ಅವರ ಹೆಸರಿಗೆ ರೆಕಾರ್ಡ್ ಆಗಿ ಹಕ್ಕುಪತ್ರವೂ ಆಗಿರುವ ಬಗ್ಗೆ ತನ್ನ ಬಳಿ ಪಟ್ಟಿ ಇರುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾದ ಚರ್ಚೆಯ ವೇಳೆ ಜಿ.ಪಂ.ನ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾಗಿರುವ ಕೊರಗಪ್ಪ ನಾಯ್ಕ ಈ ಆರೋಪ ಮಾಡಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಶೇಕರ್ ಕುಕ್ಕೇಡಿ, ದಲಿತರಿಗೆ ಭೂಮಿಗಾಗಿ ಇಂದು 94ಸಿಯಲ್ಲಿ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ ಪೂರ್ವದಲ್ಲೇ ದಲಿತರಿಗಾಗಿ ಮೀಸಲಿಟ್ಟ ಸಾವಿರಾರು ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿ ದಲಿತರಿಗೆ ಭೂಮಿ ಇಲ್ಲದಂತಾಗಿದೆ ಎಂದು ಬೇಸರಿಸಿದರು. ಸದಸ್ಯ ತುಂಗಪ್ಪ ಬಂಗೇರ ಕೂಡಾ ಪೂರಕವಾಗಿ ಮಾತನಾಡುತ್ತಾ, ಇದೊಂದು ಗಂಭೀರ ವಿಷಯ. ಡಿಸಿ ಮನ್ನಾ ಭೂಮಿಯನ್ನು ರೆಕಾರ್ಡ್ ಮಾಡಿಸಿಕೊಂಡು ಹಕ್ಕುಪತ್ರ ಮಾಡಿಕೊಂಡಿರುವ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಡಿಸಿ ಮನ್ನಾ ಯಾರ ಹೆಸರಿಗಾದರೂ ಮಂಜೂರು ಆಗಿರುವ ದಾಖಲೆ ಇದ್ದು, ಅದನ್ನು ಇನ್ನೊಬ್ಬರು ಕಬಳಿಸಿರುವ ಬಗ್ಗೆ ಪಟ್ಟಿ ಇದ್ದಲ್ಲಿ ನೀಡಿದರೆ, ತಹಶೀಲ್ದಾರರ ಮೂಲಕ ಸಹಾಯಕ ಆಯುಕ್ತರಿಂದ ಸ್ವಯಂಪ್ರೇರಿತವಾಗಿ ಅನರ್ಹ ವ್ಯಕ್ತಿಗಳಿಗೆ ಮಂಜೂರಾಗಿರುವ ಹಕ್ಕನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೆಚ್ಚುವರಿ ಗೋಮಾಳ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಕ್ರಮ

ಕೆಲ ಗ್ರಾಮಗಳಲ್ಲಿ ಗೋಮಾಳ ಭೂಮಿಯಲ್ಲಿ 30 ವರ್ಷಗಳಿಂಗಿತಲೂ ಅಧಿಕ ಸಮಯದಿಂದ ಕುಟುಂಬಗಳು ವಾಸಿಸುತ್ತಿರುವ ಪ್ರಕರಣವಿದ್ದು, ಅವರಿಗೆ ಆ ಭೂಮಿಯನ್ನು ಸಕ್ರಮಗೊಳಿಸಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ತುಂಗಪ್ಪ ಬಂಗೇರ ಹಾಗೂ ಇತರ ಕೆಲ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಡಿಸಿ ಕುಮಾರ್, ಒಂದು ಗ್ರಾಮದಲ್ಲಿ 100 ಜಾನುವಾರುಗಳಿಗೆ 12 ಎಕರೆ ಭೂಮಿಯನ್ನು ಗೋಮಾಳಕ್ಕೆ ಕಾದಿರಿಸಬೇಕಾಗಿದೆ. 12 ಎಕರೆಗಿಂತ ಜಾಸ್ತಿ ಭೂಮಿಯನ್ನು ಗೋಮಾಳದಿಂದ ಬದಲಾವಣೆ ಮಾಡಿ, ಅಧಿಸೂಚನೆ ಪ್ರಕ್ರಿಯೆ ನಡೆಸಿ ಇತರ ಸಾರ್ವಜನಿಕ ಉದ್ದೇಶಕ್ಕೆ ಬಳಸಬಹುದಾಗಿದೆ. ಈ ಬಗ್ಗೆ ವಿವರ ನೀಡುವಂತೆ ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಜಾಗ ಇದ್ದಲ್ಲಿ ಅದರ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಜಾನುವಾರಗಳ ಸಂಖ್ಯೆ ಕಡಿಮೆ ಆಗಿ ಹೆಚ್ಚುವರಿ ಜಾಗ ಇರುವ ಸಾಧ್ಯತೆ ಇದೆ. ಅದನ್ನು ಗಣತಿ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಉಳಿದಂತೆ ಹೆಚ್ಚುವರಿ ಜಾಗ ಇಲ್ಲದಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ವರದಿ ಆಧಾರದಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಡೀಮ್ಡ್ ಫಾರೆಸ್ಟ್ ಜಾಗ ಬಳಕೆ: ಸರಕಾರಕ್ಕೆ ಪ್ರಸ್ತಾವನೆ

ಡೀಮ್ಡ್ ಫಾರೆಸ್ಟ್ ಜಾಗದ ಸಮಸ್ಯೆಯಿಂದಾಗಿ ಘನತ್ಯಾಜ್ಯ ಘಟಕ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಗೆ ಸಾಧ್ಯವಾಗುತ್ತಿಲ್ಲ ಎಂಬ ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಎಡಿಸಿ ಕುಮಾರ್, ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿ 2014ರಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಸಮಿತಿ ಮಾಡಿ ಜಂಟಿ ಸರ್ವೆ ನಡೆಸಲಾಗಿದೆ. ಅದರಂತೆ 2015ರಲ್ಲಿ ಜಿಲ್ಲೆಯಲ್ಲಿ 34,000 ಹೆಕ್ಟೇರ್ ಜಮೀನನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಟ್ಟು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಕೇಂದ್ರದಿಂದ ಸುಪ್ರೀಂ ಕೋರ್ಟ್ ಮೂಲಕ ಇತ್ಯರ್ಥವಾದ ಬಳಿಕ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಹಕ್ಕುಪತ್ರದಲ್ಲಿ ಉಪಜಾತಿ ಉಲ್ಲೇಖ: ಆಕ್ಷೇಪ

ಸವೋಚ್ಛ ನ್ಯಾಯಾಲಯದ ಆದೇಶದ ಹೊರತಾಗಿಯೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲವೊಂದು ಜಾತಿಗಳಲ್ಲಿರುವ ಉಪಜಾತಿಗಳನ್ನು ಹಕ್ಕುಪತ್ರ, ಶಾಲಾ ಸರ್ಟಿಫಿಕೇಟ್‌ಗಳಲ್ಲಿ ಉಲ್ಲೇಖಿಸುವ ಮೂಲಕ ಅಧಿಕಾರಿಗಳಿಂದಲೇ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಶೇಖರ್ ಕುಕ್ಕೇಡಿ ಸಭೆಯಲ್ಲಿ ಆಕ್ಷೇಪಿಸಿದರು.

ಯಾವುದೇ ಕಾರಣಕ್ಕೂ ಆರ್‌ಟಿಸಿಯಲ್ಲಿ ಉಪಜಾತಿಯನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಉಲ್ಲೇಖಿಸುವಂತಿಲ್ಲ. ಕೆಲವೊಮ್ಮೆ ಶುಲ್ಕ ವಿನಾಯಿತಿಗಾಗಿ ಶಾಲಾ ಪ್ರವೇಶದ ಸಂದರ್ಭ ಅರ್ಜಿದಾರರೇ ಉಲ್ಲೇಖಿಸಿರುವ ಸಾಧ್ಯತೆಗಳಿವೆ. ಹಾಗಿದ್ದರೂ ಅಂತಹ ಪ್ರಮಾದಗಳು ಆಗಿರುವ ಬಗ್ಗೆ ನಿರ್ದಿಷ್ಟ ಪ್ರಕರಣಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಸಿ ಸಭೆಯಲ್ಲಿ ತಿಳಿಸಿದರು.

ತಮ್ಮ ಕ್ಷೇತ್ರದ ಶಿರ್ಲಾಲು, ಕರ್ಮಾರು ಗ್ರಾ.ಪಂ.ಗಳಲ್ಲಿ ಇಂತಹ ಪ್ರಮಾದ ನಡೆದಿದೆ. ಒಂಭತ್ತು ಮಂದಿಯ ಆರ್‌ಟಿಸಿಯಲ್ಲಿ ಅವರ ಉಪಜಾತಿಯನ್ನು ಉಲ್ಲೇಖ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಯ ಪ್ರಮಾಣ ಪತ್ರದಲ್ಲೂ ಉಲ್ಲೇಖಿಸಲಾಗಿದೆ ಎಂದು ಶೇಕರ್ ಕುಕ್ಕೇಡಿ ತಿಳಿಸಿದಾಗ, ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸಿಇಒ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಎಂಡೋ ಪೀಡಿತರ ಹೆಸರಿನಲ್ಲಿ ನಿಧಿ ಸಂಗ್ರಹ: ವರದಿಗೆ ಸೂಚನೆ

ಕೆಲ ವರ್ಷಗಳ ಹಿಂದೆ ಖಾಸಗಿ ಸುದ್ದಿವಾಹಿನಿಯೊಂದು ಎಂಡೋ ಪೀಡಿತರ ಹೆಸರಿನಲ್ಲಿ ಅಭಿಯಾನದ ಮೂಲಕ 5 ಕೋಟಿ ರೂ.ಗಳಿಗೂ ಅಧಿಕ ನಿಧಿ ಸಂಗ್ರಹ ಮಾಡಿದ್ದರೂ ಅದನ್ನು ಇನ್ನೂ ಸಂತ್ರಸ್ತರಿಗೆ ನೀಡಲಾಗಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಾನು ದೂರು ನೀಡಿ, ದಾಖಲೆ ಒದಗಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಕೊರಗಪ್ಪ ನಾಯ್ಕಾ ಆಕ್ಷೇಪಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾರವರು ಈ ಬಗ್ಗೆ ಡಿಎಚ್‌ಒ ಡಾ. ರಾಮಕೃಷ್ಣ ಅವರನ್ನು ಪ್ರಶ್ನಿಸಿದಾಗ, ತಮಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.

ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಈ ಹಿಂದೆಯೂ ಈ ಬಗ್ಗೆ ಪ್ರಸ್ತಾಪ ಆಗಿದ್ದ ಸಂದರ್ಭದಲ್ಲಿ ಶಾಶ್ವತ ಪಾಲನಾ ಕೇಂದ್ರ ಮಾಡುವುದಾದರೆ ತಮಗೆ ಹಣ ನೀಡಲು ಅವಕಾಶ ಇದೆ ಎಂದು ಸಂಬಂಧಪಟ್ಟ ಸುದ್ದಿವಾಹಿನಿಯವರು ತಿಳಿಸಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಆ ಹಣ ಯಾವ ಖಾತೆಯಲ್ಲಿದೆ? ಅದನ್ನು ಯಾವ ರೀತಿ ಬಳಕೆ ಮಾಡಲಾಗಿದೆ ಎಂಬ ಜಿಜ್ಞಾಸೆ ಹಾಗೇ ಉಳಿದಿದೆ ಎಂದು ಹೇಳಿದರು. ಈ ಬಗ್ಗೆ ಎರಡು ದಿನಗಳೊಳಗೆ ಜಿಲ್ಲಾಧಿಕಾರಿ ಹಾಗೂ ತನಗೆ ವರದಿಯನ್ನು ಒದಗಿಸುವಂತೆ ಸಿಇಒರವರು ಡಿಎಚ್‌ಒಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಶಾಹುಲ್ ಹಮೀದ್, ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News