ನೀವಿಲ್ಲಿಗೆ ದೋಣಿಯಲ್ಲಿ ಬಂದಿರಾ?

Update: 2016-08-31 17:30 GMT

ಹೊಸದಿಲ್ಲಿ, ಆ.31: ಭಾರೀ ಮಳೆಯ ಕಾರಣ ರಾಜಧಾನಿಯ ರಸ್ತೆಗಳು ಜಲಾವೃತವಾದ ಕಾರಣದಿಂದ ಐಐಟಿ-ದಿಲ್ಲಿಯ ಕ್ಯಾಂಪಸ್‌ನಲ್ಲಿ ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಬುಧವಾರ ನೀಡಬೇಕಾಗಿದ್ದ ಉಪನ್ಯಾಸ ಒಂದು ತಾಸು ತಡವಾಗಿ ಆರಂಭಗೊಂಡಿದೆ.

ದಿಲ್ಲಿಯ ಮಳೆಯನ್ನು ಕಂಡ ಕೆರ್ರಿ, ‘‘ನೀವಿಲ್ಲಿಗೆ ಹೇಗೆ ಬಂದಿರೋ ನನಗೆ ತಿಳಿಯದು. ಇಲ್ಲಿಗೆ ಬರಲು ನಿಮಗೆ ಖಂಡಿತ ದೋಣಿಯ ಅಗತ್ಯವಿದೆ ಎಂದು ದಕ್ಷಿಣ ದಿಲ್ಲಿಯ ಸಂಸ್ಥೆಯಲ್ಲಿ ಸೇರಿದ್ದ ಶ್ರೋತೃಗಳ ಮುಂದೆ ಚಟಾಕಿ ಹಾರಿಸಿದರು.
ಅಮೆರಿಕನ್ ನಾಯಕರೊಡನೆ ಪ್ರಯಾಣಿಸುತ್ತಿದ್ದ ಪತ್ರಕರ್ತರು ಮುಳುಗಡೆಗೊಂಡಿದ್ದ ರಸ್ತೆಗಳ ಫೋಟೊಗಳನ್ನು ಟ್ವೀಟ್ ಮಾಡಿ ದ್ದಾರೆ. ಭಾರೀ ಮಳೆಯಿಂದಾಗಿ ಹಲವು ಧಾರ್ಮಿಕ ಸ್ಥಳಗಳಿಗೆ ನಿಗದಿಗೊಂಡಿದ್ದ ಕೆರ್ರಿಯವರ ಭೇಟಿಯನ್ನು ರದ್ದುಪಡಿಸಲಾಗಿದೆ.
ಸೋಮವಾರ ದಿಲ್ಲಿಗೆ ಬಂದಿಳಿದಾಗಲೇ ಅವರು ಮಳೆಯಿಂದಾಗಿ ತೆವಳುತ್ತಿದ್ದ ಸಂಚಾರ ದಟ್ಟಣೆಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಸಿಲುಕಿದ್ದರು.
ಬುಧವಾರದ ಮಳೆಯು ದಿಲ್ಲಿಯ ರಾಷ್ಟ್ರ ರಾಜಧಾನಿ ವಲಯದ ವಿಶಾಲ ಭಾಗವನ್ನು ಮುಳುಗಿಸಿದೆ. ಇದು ಪ್ರಯಾಣಿಕರನ್ನು ಮೈಲುಗಟ್ಟಲೆ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಸಿದ್ದ ಕಳೆದ ತಿಂಗಳ ಇಂತಹದೇ ಪರಿಸ್ಥಿತಿಯ ನೆನಪು ಮರುಕಳಿಸುವಂತೆ ಮಾಡಿತು.
ಮುಂಜಾನೆ 4 ತಾಸುಗಳ ಕಾಲ ಭಾರೀ ಗಾಳಿ ಹಾಗೂ ಸಿಡಿಲಿನೊಂದಿಗೆ ಸುರಿದ ಕುಂಭದ್ರೋಣ ಮಳೆಯು ದಕ್ಷಿಣ ಹಾಗೂ ಮಧ್ಯ ದಿಲ್ಲಿಯ ಹಲವು ರಸ್ತೆಗಳನ್ನು ಹೊಳೆಗಳನ್ನಾಗಿ ಮಾರ್ಪಡಿಸಿತ್ತು. ಇದರಿಂದಾಗಿ ನೂರಾರು ಜನರು ಬಸ್ ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಅತಂತ್ರರಾಗುಳಿಯಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News